ಆಲ್ಕರಜ್‌ಗೆ ಚೊಚ್ಚಲ ಫ್ರೆಂಚ್‌ ಗ್ರ್ಯಾನ್‌ಸ್ಲಾಂ!

| Published : Jun 10 2024, 12:30 AM IST / Updated: Jun 10 2024, 04:45 AM IST

ಸಾರಾಂಶ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಜರ್ಮನಿಯ ಜ್ವೆರೆವ್‌ ವಿರುದ್ಧ ರೋಚಕ ಜಯ. ಜ್ವೆರೆವ್‌ರ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ಕನಸು ಭಗ್ನ.

ಪ್ಯಾರಿಸ್‌: ಟೆನಿಸ್‌ನ ಹೊಸ ಸೂಪರ್ ಸ್ಟಾರ್‌ ಎಂದೇ ಕರೆಸಿಕೊಳ್ಳುವ ಸ್ಪೇನ್‌ನ ಕಾರ್ಲೊಸ್‌ ಆಲ್ಕರಜ್ ಚೊಚ್ಚಲ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಟೂರ್ನಿಯುದ್ದಕ್ಕೂ ಅಧಿಪತ್ಯ ಸಾಧಿಸಿದ್ದ 21ರ ಆಲ್ಕರಜ್‌ ಒಟ್ಟಾರೆ 3ನೇ ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಕನಸು ನುಚ್ಚುನೂರಾಯಿತು.

ಭಾನುವಾರ 4 ಗಂಟೆ 30 ನಿಮಿಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಹಣಾಹಣಿಯಲ್ಲಿ 3ನೇ ಶ್ರೇಯಾಂಕಿತ ಆಲ್ಕರಜ್‌, 4ನೇ ಶ್ರೇಯಾಂಕಿತ ಜ್ವೆರೆವ್‌ ವಿರುದ್ಧ 6-3, 2-6, 5-7, 6-1, 6-2 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸುಲಭದಲ್ಲಿ ಗೆದ್ದಿದ್ದ ಆಲ್ಕರಜ್‌ಗೆ ಬಳಿಕ ಜ್ವೆರೆವ್‌ ತೀವ್ರ ಪೈಪೋಟಿ ನೀಡಿದರು. 2 ಮತ್ತು 3ನೇ ಸೆಟ್‌ ತಮ್ಮದಾಗಿಸಿಕೊಂಡ 27ರ ಜ್ವೆರೆವ್‌ ಬಳಿಕ ಆಲ್ಜರಜ್‌ರ ವೇಗದ ಹೊಡೆತಗಳ ಮುಂದೆ ಮಂಡಿಯೂರಿದರು. ಕೊನೆ ಸೆಟ್‌ನಲ್ಲಿ ಜ್ವೆರೆವ್‌ ಪ್ರಬಲ ಪ್ರತಿರೋಧ ತೋರಿದರಾದರೂ ಪ್ರಶಸ್ತಿ ಆಲ್ಕರಜ್‌ ಪಾಲಾಯಿತು.

2ನೇ ಬಾರಿ ಗ್ರ್ಯಾನ್‌ಸ್ಲಾಂ ಮಿಸ್‌

ಟೂರ್ನಿಯ ಮೊದಲ ಸುತ್ತಿನಲ್ಲೇ 22 ಗ್ರ್ಯಾನ್‌ಸ್ಲಾಂಗಳ ಒಡೆಯ ರಾಫೆಲ್‌ ನಡಾಲ್‌ರನ್ನು ಸೋಲಿಸಿದ್ದ ಜ್ವೆರೆವ್‌ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಅವರು 2 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದರೂ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 2020ರಲ್ಲಿ ಯುಎಸ್‌ ಓಪನ್‌ನಲ್ಲೂ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 

ಫೈನಲ್‌ಗೇರಿದ 3 ಬಾರಿಯೂ ಗೆಲುವು

ಆಲ್ಕರಜ್‌ಗೆ ಇದು 3ನೇ ಗ್ರ್ಯಾನ್‌ಸ್ಲಾಂ ಕಿರೀಟ. ಅವರು 3 ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯ ಫೈನಲ್‌ಗೇರಿದ್ದು, ಒಮ್ಮೆಯೂ ಸೋತಿಲ್ಲ. 2022ರಲ್ಲಿ ಮೊದಲ ಬಾರಿ ಯುಎಸ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಆಲ್ಕರಜ್‌, ಕಳೆದ ವರ್ಷ ವಿಂಬಲ್ಡನ್‌ ಟ್ರೋಫಿ ತಮ್ಮದಾಗಿಸಿಕೊಂಡಿದ್ದರು.

 ₹21.6 ಕೋಟಿ: ಫ್ರೆಂಚ್‌ ಓಪನ್‌ ವಿಜೇತ ಕಾರ್ಲೊಸ್‌ ಆಲ್ಜರಜ್‌ ಪಡೆದ ಬಹುಮಾನ ಮೊತ್ತ.

₹10.8 ಕೋಟಿ: ರನ್ನರ್‌-ಅಪ್‌ ಸ್ಥಾನ ಪಡೆದ ಜರ್ಮನಿಯ ಜ್ವೆರೆವ್‌ಗೆ ಸಿಕ್ಕ ಬಹುಮಾನ ಮೊತ್ತ.