ನ್ಯೂಜಿಲೆಂಡ್ ವಿರುದ್ಧ ಜ.11ರಿಂದ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಶನಿವಾರ ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಿತು. ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ವಾಪಸಾಗಿದ್ದು, ಮೊಹಮದ್ ಸಿರಾಜ್‌ಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಜ.11ರಿಂದ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಶನಿವಾರ ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಿತು. ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ವಾಪಸಾಗಿದ್ದು, ಮೊಹಮದ್ ಸಿರಾಜ್‌ಗೆ ಮತ್ತೊಂದು ಅವಕಾಶ ನೀಡಲಾಗಿದೆ. ಟಿ20 ವಿಶ್ವಕಪ್ ಹತ್ತಿರವಿರುವ ಕಾರಣ, ಜಸ್‌ಪ್ರೀತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ.
ಕತ್ತು ನೋವಿನ ಕಾರಣ ಗಿಲ್ ದ.ಆಫ್ರಿಕಾ ವಿರುದ್ಧ ಕಳೆದ ತಿಂಗಳು ನಡೆದಿದ್ದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅಯ್ಯರ್ ಹಲವು ದಿನದಿಂದ ಕ್ರಿಕೆಟ್‌ನಿಂದ ದೂರವಿದ್ದರು. ಗಿಲ್ ಸಂಪೂರ್ಣ ಫಿಟ್ ಆಗಿದ್ದು, ಅಯ್ಯರ್ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ಸಿಬ್ಬಂದಿ ಇನ್ನಷ್ಟೇ ಅನುಮತಿ ನೀಡಬೇಕಿದೆ. ಆದರೂ, ಅಯ್ಯರ್‌ರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ದ.ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ತಂಡದಲ್ಲಿದ್ದ ತಿಲಕ್ ವರ್ಮಾ, ಧೃವ್ ಜುರೆಲ್ ಹಾಗೂ ಋತುರಾಜ್ ಗಾಯಕ್ವಾಡ್‌ರನ್ನು ಕಿವೀಸ್ ವಿರುದ್ಧದ ಸರಣಿಗೆ ಕೈಬಿಡಲಾಗಿದೆ. ತಿಲಕ್ ಹಾಗೂ ಜುರೆಲ್‌ಗೆ ಹರಿಣಗಳ ವಿರುದ್ಧ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಋತುರಾಜ್, ರಾಯ್‌ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಆಡಿದ ಶತಕ ಬಾರಿಸಿದ್ದರು.
ಇನ್ನು, ದ.ಆಫ್ರಿಕಾ ವಿರುದ್ಧ ಸರಣಿಯಲ್ಲಿ ತಂಡ ಮುನ್ನಡೆಸಿದ್ದ ಕೆ.ಎಲ್.ರಾಹುಲ್‌ರನ್ನು ಉಪನಾಯಕನನ್ನಾಗಿ ನೇಮಿಸದೆ ಇರುವುದು ಅಚ್ಚರಿಗೆ ಕಾರಣವಾಗಿದೆ.
ಗಿಲ್ ಹಾಗೂ ಅಯ್ಯರ್ ಜೊತೆ ರೋಹಿತ್, ಕೊಹ್ಲಿ, ಜೈಸ್ವಾಲ್
ಗಿಲ್ ಹಾಗೂ ಅಯ್ಯರ್ ಜೊತೆ ರೋಹಿತ್, ಕೊಹ್ಲಿ, ಜೈಸ್ವಾಲ್ ತಂಡದಲ್ಲಿರುವ ತಜ್ಞ ಬ್ಯಾಟರ್‌ಗಳು. ರಾಹುಲ್, ಪಂತ್ ವಿಕೆಟ್ ಕೀಪರ್-ಬ್ಯಾಟರ್‌ಗಳು. ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ ಆಲ್ರೌಂಡರ್‌ಗಳು. ಕುಲ್ದೀಪ್ ಯಾದವ್ ತಜ್ಞ ಸ್ಪಿನ್ನರ್ ಆಗಿದ್ದು, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್ ಹಾಗೂ ಸಿರಾಜ್ ವೇಗದ ಬೌಲರ್‌ಗಳಾಗಿ ಸ್ಥಾನ ಪಡೆದಿದ್ದಾರೆ.
ಏಕದಿನ ಸರಣಿಯು ಜ.11ರಂದು ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ವಡೋದರಾದಲ್ಲಿ ನಡೆಯಲಿದೆ. ಜ.14ರಂದು ರಾಜ್‌ಕೋಟ್‌ನಲ್ಲಿ 2ನೇ, ಜ.18ರಂದು ಇಂದೋರ್‌ನಲ್ಲಿ 3ನೇ ಪಂದ್ಯ ನಡೆಯಲಿದೆ. ಆ ಬಳಿಕ 5 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಇದಕ್ಕಾಗಲೇ ತಂಡ ಪ್ರಕಟಗೊಂಡಿದೆ. ಭಾರತ ತಂಡ: ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ರಿಷಭ್ ಪಂತ್, ನಿತೀಶ್ ರೆಡ್ಡಿ, ಅರ್ಶ್‌ದೀಪ್ ಸಿಂಗ್.
ಪಡಿಕ್ಕಲ್, ಶಮಿಗಿಲ್ಲ ಸ್ಥಾನ
ವಿಜಯ್ ಹಜಾರೆ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಆಟಗಾರರನ್ನು ಬಿಸಿಸಿಐ ಆಯ್ಕೆಗೆ ಪರಿಗಣಿಸಿಲ್ಲ. ದೇವದತ್ ಪಡಿಕ್ಕಲ್ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು. ಆದರೆ ಅವರಿಗೆ ನಿರಾಸೆ ಉಂಟಾಗಿದೆ. ಮೊಹಮದ್ ಶಮಿ ಫಿಟ್ ಇದ್ದರೂ ಅವರನ್ನು ಏಕೆ ಕಡೆಗಣಿಸಲಾಗುತ್ತಿದೆ ಎನ್ನುವುದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಉತ್ತರಿಸುತ್ತಿಲ್ಲ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್‌ಗೂ ಅವಕಾಶ ಸಿಕ್ಕಿಲ್ಲ.