ಐಪಿಎಲ್‌ ಪಂದ್ಯಾವಳಿಗೆ ಬಾಂಗ್ಲಾದೇಶ ಮೂಲದ ತಾರಾ ಬೌಲರ್‌ ಮುಸ್ತಾಫಿಜುರ್‌ ರಹಮಾನ್‌ನ್ನು ಕೋಲ್ಕತಾ ನೈಟ್‌ ರೈಡರ್ಸ್‌ ಕೈಬಿಟ್ಟಿದೆ. ಹರಾಜಿನಲ್ಲಿ 9.2 ಕೋಟಿ ರು. ಖರೀದಿಸಿದ್ದ ಆಟಗಾರನನ್ನು ಕೈಬಿಟ್ಟಿದ್ದಕ್ಕೆ ಕೆಕೆಆರ್‌ ಯಾವುದೇ ಸ್ಪಷ್ಟನೆ ನೀಡಿಲ್ಲ.

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಬೇಕೆನ್ನುವ ನಿಲುವು ತಾಳಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಬಾಂಗ್ಲಾದ ತಾರಾ ವೇಗಿ ಮುಸ್ತಾಫಿಜುರ್‌ ರಹಮಾನ್‌ರನ್ನು ಮುಂಬರುವ ಐಪಿಎಲ್‌ನಿಂದ ಹೊರಹಾಕಿಸಿದೆ. ಬಿಸಿಸಿಐ ಸೂಚನೆ ಮೇರೆಗೆ ಮುಸ್ತಾಫಿಜುರ್‌ರನ್ನು ತಂಡದಿಂದ ಕೈಬಿಟ್ಟಿರುವುದಾಗಿ ಕೆಕೆಆರ್‌ ತಂಡ ಪ್ರಕಟಣೆ ನೀಡಿದೆ.

ಕಳೆದ ತಿಂಗಳು ನಡೆದಿದ್ದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮುಸ್ತಾಫಿಜುರ್‌ ಬರೋಬ್ಬರಿ 9.2 ಕೋಟಿ ರು.ಗೆ ಕೆಕೆಆರ್‌ ತಂಡ ಸೇರಿದ್ದರು. ಕಳೆದ ಕೆಲ ದಿನಗಳಿಂದ ಹಿಂದೂ ಪರ ಸಂಘಟನೆಗಳು, ಸ್ವಾಮೀಜಿಗಳು, ಬಿಜೆಪಿ ಮುಖಂಡರು ಸೇರಿ ಹಲವರು, ಬಾಂಗ್ಲಾದಲ್ಲಿ ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದರೂ ಆ ದೇಶದ ವೇಗಿಗೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಒಡೆತನದ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ, ಬಿಸಿಸಿಐ ಮುಸ್ತಾಫಿಜುರ್‌ರನ್ನು ಐಪಿಎಲ್‌ನಿಂದ ಹೊರಹಾಕಿಸಿದೆ.

2008ರ ಮುಂಬೈ ದಾಳಿ ಬಳಿಕ ಪಾಕಿಸ್ತಾನಿ ಕ್ರಿಕೆಟಿಗರನ್ನು ಐಪಿಎಲ್‌ನಿಂದ ಬ್ಯಾನ್‌ ಮಾಡಿದಂತೆ ಬಾಂಗ್ಲಾ ಆಟಗಾರರಿಗೂ ನಿಷೇಧ ಹೇರಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ದ್ವಿಪಕ್ಷೀಯ ಸರಣಿಗಳೂ ಇಲ್ಲ?: ಪಾಕಿಸ್ತಾನ ವಿರುದ್ಧ ಹೇಗೆ ದ್ವಿಪಕ್ಷೀಯ ಸರಣಿಗಳನ್ನು ಆಡುವುದಿಲ್ಲವೋ ಅದೇ ರೀತಿ ಬಾಂಗ್ಲಾ ಜೊತೆಗಿನ ದ್ವಿಪಕ್ಷೀಯ ಒಪ್ಪಂದಗಳನ್ನೂ ರದ್ದುಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಮಿಥುನ್‌ ಮನ್ಹಾನ್‌ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರಾದರೂ, ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಭಾರತ ತಂಡ ಬಾಂಗ್ಲಾ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಆ ದೇಶದಲ್ಲಿ ಅಶಾಂತಿ ನೆಲೆಸಿದ್ದ ಕಾರಣ ಪ್ರವಾಸವನ್ನು ಬಿಸಿಸಿಐ ಮುಂದೂಡಿತ್ತು. ಶುಕ್ರವಾರ ಬಾಂಗ್ಲಾ ಕ್ರಿಕೆಟ್‌ ಮಂಡಳಿ ತನ್ನ ತವರಿನ ವೇಳಾಪಟ್ಟಿಯನ್ನು ಪ್ರಕಟಿಸಿ ಈ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತ ತಂಡ ಬಾಂಗ್ಲಾಗೆ ತಲಾ 3 ಪಂದ್ಯಗಳ ಏಕದಿನ, ಟಿ20 ಪಂದ್ಯಗಳ ಸರಣಿ ಆಡಲು ಬರಲಿದೆ ಎಂದಿತ್ತು. ಆದರೆ ಬಿಸಿಸಿಐ ಬಾಂಗ್ಲಾ ಪ್ರವಾಸಕ್ಕೆ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ. ಒಂದು ವೇಳೆ ಭಾರತ ಪ್ರವಾಸ ಕೈಗೊಳ್ಳದಿದ್ದರೆ, ಬಾಂಗ್ಲಾಗೆ ಕೋಟ್ಯಂತರ ರು. ನಷ್ಟವಾಗಲಿದೆ.

ಬಾಂಗ್ಲಾದಿಂದ ಐಸಿಸಿಗೆ ಮನವಿ?:

ಮುಸ್ತಾಫಿಜುರ್‌ರನ್ನು ಐಪಿಎಲ್‌ನಿಂದ ಹೊರಹಾಕಿ, ತನ್ನೊಂದಿಗೆ ದ್ವಿಪಕ್ಷೀಯ ಸರಣಿ ಆಡದಿರಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ವಿಚಲಿತಗೊಂಡಿರುವ ಬಾಂಗ್ಲಾ ಕ್ರಿಕೆಟ್‌ ಮಂಡಳಿ, ಐಸಿಸಿಯ ಮೊರೆ ಹೋಗಲು ನಿರ್ಧರಿಸಿದೆ ಎನ್ನಲಾಗಿದೆ. ಜೊತೆಗೆ ಫೆ.7ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಐಸಿಸಿಗೆ ಒತ್ತಾಯಿಸಲಿದೆ ಎಂದೂ ಹೇಳಲಾಗುತ್ತಿದೆ.

ಭಾರತದ ಕ್ರಮ ಏಕೆ?

ಬಾಂಗ್ಲಾದಲ್ಲಿ 2 ವಾರದಲ್ಲಿ ನಾಲ್ವರು ಹಿಂದೂಗಳ ಹತ್ಯೆ. ಹತ್ತಾರು ಮನೆಗಳು ಧ್ವಂಸ.

ಭಾರತದ ತಾಕೀತಿನ ಹೊರತೂ ಹಿಂದೂ ರಕ್ಷಣೆಗೆ ಕ್ರಮಗೊಳ್ಳದ ಯೂನಸ್‌ ಸರ್ಕಾರ

ಹೀಗಾಗಿ ಐಪಿಎಲ್‌ನಿಂದ ಬಾಂಗ್ಲಾ ಆಟಗಾರ ಔಟ್‌, ಮುಂದೆ ದಿಪಕ್ಷೀಯ ಪಂದ್ಯ ರದ್ದು

ಈ ಮೂಲಕ ಭವಿಷ್ಯದಲ್ಲಿ ಕಠಿಣ ಕ್ರಮಗೊಳ್ಳುವ ಕುರಿತು ಬಾಂಗ್ಲಾದೇಶಕ್ಕೆ ಸಂದೇಶ

ಕೆಕೆಆರ್‌ನಿಂದ ಬಾಂಗ್ಲಾತಾರಾ ವೇಗಿ ಕಿಕ್‌ಔಟ್‌!

ನವದೆಹಲಿ: ಪ್ರಸಕ್ತ ಸಾಲಿನ ಐಪಿಎಲ್‌ ಪಂದ್ಯಾವಳಿಗೆ ಬಾಂಗ್ಲಾದೇಶ ಮೂಲದ ತಾರಾ ಬೌಲರ್‌ ಮುಸ್ತಾಫಿಜುರ್‌ ರಹಮಾನ್‌ನ್ನು ಕೋಲ್ಕತಾ ನೈಟ್‌ ರೈಡರ್ಸ್‌ ಕೈಬಿಟ್ಟಿದೆ. ಹರಾಜಿನಲ್ಲಿ 9.2 ಕೋಟಿ ರು. ಖರೀದಿಸಿದ್ದ ಆಟಗಾರನನ್ನು ಕೈಬಿಟ್ಟಿದ್ದಕ್ಕೆ ಕೆಕೆಆರ್‌ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ಹೊರತಾಗಿಯೂ ಆ ದೇಶದ ಆಟಗಾರನ ಸೇರ್ಪಡೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಬಿಸಿಸಿಐ ಸೂಚನೆ ಅನ್ವಯ ಕೆಕೆಆರ್‌ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಬಾಂಗ್ಲಾಕ್ಕೆ ಭಾರೀ ನಷ್ಟ

ಒಂದು ವೇಳೆ ದ್ವಿಪಕ್ಷೀಯ ಸರಣಿ ರದ್ದು ಮಾಡಿದರೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ ಇದರಿಂದ, ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ ಭಾರೀ ಆರ್ಥಿಕ ಪೆಟ್ಟು ಬೀಳಲಿದೆ. ಪಂದ್ಯಾವಳಿಗಾಗಿ ಐಸಿಸಿ ನೀಡುವ ಹಣ, ಪ್ರಸಾರದ ಹಕ್ಕಿನಿಂದ ಬರುವ ಆದಾಯವೂ ಬಾಂಗ್ಲಾದ ಕೈತಪ್ಪಲಿದೆ. ಭವಿಷ್ಯದಲ್ಲು ಬಾಂಗ್ಲಾ ಆಟಗಾರರಿಗೆ ಐಪಿಎಲ್‌ ಸೇರ್ಪಡೆ ಅವಕಾಶ ತಪ್ಪಲಿದೆ. ಅಲ್ಲದೆ ವಿದೇಶಗಳಲ್ಲಿರುವ ಐಪಿಎಲ್‌ ಮಾದರಿಯ ಕ್ರಿಕೆಟ್‌ ಪಂದ್ಯಾವಳಿಗಳಲ್ಲಿ ಭಾರತೀಯ ತಂಡಗಳ ಸೇರ್ಪಡೆ ಅವಕಾಶವೂ ಸಿಗಲ್ಲ.