ಸಾರಾಂಶ
ಮಲಾಗ (ಸ್ಪೇನ್): ಟೆನಿಸ್ ಲೋಕದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ, ಸ್ಪೇನ್‌ನ ರಾಫೆಲ್ ನಡಾಲ್ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಪಡೆದಿದ್ದಾರೆ. ಮಂಗಳವಾರ ಇಲ್ಲಿ ನಡೆದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಕಣಕ್ಕಿಳಿದ ಸ್ಪೇನ್ ತಂಡದಲ್ಲಿ ಆಡಿದ ನಡಾಲ್, ಗೆಲುವು ಸಾಧಿಸಲು ವಿಫಲರಾದರು.
ಬೊಟಿಕ್ ವಾನ್ ಡೆ ಝ್ಯಾಂಡ್‌ಸ್ಲ್ಕಪ್ ವಿರುದ್ಧ 4-6, 4-6 ಸೆಟ್‌ಗಳಲ್ಲಿ ನಡಾಲ್ ಸೋಲುಂಡರು. ಸ್ಪೇನ್ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಕಾರಣ, ನಡಾಲ್‌ರ ವೃತ್ತಿಬದುಕಿಗೂ ತೆರೆ ಬಿತ್ತು.ಪಂದ್ಯದ ಮುಗಿದ ಬಳಿಕ ನಡಾಲ್ ಕಣ್ಣೀರಿಡುತ್ತಾ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.
ದಿಗ್ಗಜ ಟೆನಿಸಿಗರಾದ ಫೆಡರರ್, ಜೋಕೋವಿಚ್, ಸೆರೆನಾ, ಮಾರ್ಟಿನೆಜ್, ಆ್ಯಂಡಿ ಮರ್ರೆ, ಗಾಲ್ಫ್ ತಾರೆ ಸರ್ಜಿಯೋ ಗಾರ್ಸಿಯಾ, ದಿಗ್ಗಜ ಫುಟ್ಬಾಲಿಗ ಡೇವಿಡ್ ಬೆಕ್‌ಹ್ಯಾಮ್ ಸೇರಿ ಅನೇಕರು ನಡಾಲ್ ಬಗ್ಗೆ ಮಾತನಾಡಿರುವ, ಅವರ ಮುಂದಿನ ಬದುಕಿಗೆ ಶುಭ ಕೋರಿರುವ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ಆ ವಿಡಿಯೋವನ್ನು ವೀಕ್ಷಿಸಿದ ನಡಾಲ್ ಇನ್ನಷ್ಟು ಭಾವುಕರಾದರು.
ಬಳಿಕ ಮಾತನಾಡಿದ ನಡಾಲ್, ‘ಪ್ರಶಸ್ತಿಗಳು, ದಾಖಲೆಗಳು, ಅಂಕಿ-ಅಂಶಗಳು ಇವೆಲ್ಲಾ ಇದ್ದೇ ಇರುತ್ತದೆ. ಆದರೆ ಜನ ನನ್ನನ್ನು ಮಲೋರ್ಕಾದ ಸಣ್ಣ ಹಳ್ಳಿಯ ಒಬ್ಬ ಒಳ್ಳೆಯ ವ್ಯಕ್ತಿ, ತನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ಕಠಿಣ ಪರಿಶ್ರಮ ವಹಿಸಿ ಯಶಸ್ವಿಯಾದ ಎಂದು ನೆನಪಿಸಿಕೊಳ್ಳಬೇಕು’ ಎಂದರು.2001ರಲ್ಲಿ ತಮ್ಮ 14ನೇ ವಯಸ್ಸಿನಲ್ಲೇ ವೃತ್ತಿಪರ ಟೆನಿಸಿಗರಾಗಿದ್ದ ನಡಾಲ್, 22 ಗ್ರ್ಯಾನ್‌ಸ್ಲಾಂ ಸೇರಿ ಒಟ್ಟು 92 ಎಟಿಪಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.22: ನಡಾಲ್ 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದಾರೆ. ಇದು ಟೆನಿಸ್‌ನಲ್ಲಿ 2ನೇ ಗರಿಷ್ಠ.
92: ನಡಾಲ್ ಗೆದ್ದಿರುವ ಎಟಿಪಿ ಪ್ರಶಸ್ತಿಗಳ ಸಂಖ್ಯೆ 92. ಅತ್ಯಧಿಕ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ 5ನೇ ಸ್ಥಾನ.
14: ಫ್ರೆಂಚ್ ಓಪನ್‌ನಲ್ಲಿ ನಡಾಲ್ 14 ಬಾರಿ ಚಾಂಪಿಯನ್. ಯಾವುದೇ ಟೆನಿಸಿಗರ ಪೈಕಿ ಗರಿಷ್ಠ.
02: ನಡಾಲ್ ಒಲಿಂಪಿಕ್ಸ್‌ನಲ್ಲಿ 2 ಬಾರಿ ಚಿನ್ನದ ಪದಕ ಗೆದ್ದಿದ್ದಾರೆ. 1 ಸಿಂಗಲ್ಸ್, 1 ಡಬಲ್ಸ್.
1: ವಿಶ್ವ ಟೆನಿಸ್ ರ್‍ಯಾಂಕಿಂಗ್‌ನಲ್ಲಿ ನಡಾಲ್ 209 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದರು.