ಪ್ಯಾರಿಸ್‌ನಲ್ಲಿ ಐಡಿ ಕಾರ್ಡ್‌ ದುರ್ಬಳಕೆ : ರೆಸ್ಲರ್‌ ಅಂತಿಮ್‌ 3 ವರ್ಷ ಬ್ಯಾನ್‌?

| Published : Aug 09 2024, 12:33 AM IST / Updated: Aug 09 2024, 03:58 AM IST

ಸಾರಾಂಶ

ಅಂತಿಮ್‌ 53 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲೇ ಸೋತಿದ್ದರು. ಬಳಿಕ ಐಡಿ ಕಾರ್ಡ್‌ ದುರ್ಬಳಕ್ಕೆ ವಿಚಾರದಲ್ಲಿ ಅವರನ್ನು ಕ್ರೀಡಾ ಗ್ರಾಮದಿಂದ ಹೊರಹಾಕಲಾಗಿದ್ದು, ಭಾರತಕ್ಕೆ ಮರಳಿದ್ದಾರೆ.

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮದಲ್ಲಿ ತಮ್ಮ ಗುರುತಿನ ಕಾರ್ಡ್‌ ಅನ್ನು ಸಹೋದರಿಗೆ ನೀಡಿ ದುರ್ಬಳಕೆ ಮಾಡಿದ್ದಕ್ಕೆ ಭಾರತದ ತಾರಾ ಕುಸ್ತಿಪಟು ಅಂತಿಮ್‌ ಪಂಘಲ್‌ಗೆ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ) 3 ವರ್ಷ ನಿಷೇಧ ಹೇರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಅವರನ್ನು ಈಗಾಗಲೇ ಕ್ರೀಡಾ ಗ್ರಾಮದಿಂದ ಹೊರಹಾಕಲಾಗಿದ್ದು, ಭಾರತಕ್ಕೆ ಮರಳಿದ್ದಾರೆ. 

ಬುಧವಾರ 53 ಕೆ.ಜಿ. ವಿಭಾಗದ ಮೊದಲ ಸುತ್ತಿನ ಸೋಲಿನ ಬಳಿಕ ಕ್ರೀಡಾ ಗ್ರಾಮದಲ್ಲಿರುವ ತಮ್ಮ ಸಾಮಾಗ್ರಿಯನ್ನು ತರಲು, ಅಂತಿಮ್‌ ತಮ್ಮ ಐಡಿ ಕಾರ್ಡ್‌ ಅನ್ನು ಸಹೋದರಿ ನಿಶಾ ಪಂಘಲ್‌ಗೆ ನೀಡಿದ್ದರು. ಆಕೆ ಅಂತಿಮ್‌ರ ಐಡಿ ಕಾರ್ಡ್‌ ಬಳಸಿ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಿದರೂ, ಹಿಂದಿರುಗುವಾಗ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ಅಲ್ಲಿ ಪೊಲೀಸರು ಹೇಳಿಕೆ ದಾಖಲಿಸಿ ಬಿಡುಗಡೆ ಮಾಡಿದ್ದಾರೆ.

ಉದ್ದೇಶಪೂರ್ವಕ ಅಲ್ಲ: ಅಂತಿಮ್ ಸ್ಪಷ್ಟಣೆ

ಕಾರ್ಡ್‌ ದುರ್ಬಳಕೆ ಬಗ್ಗೆ ಸ್ಪಷ್ಟಣೆ ನೀಡಿರುವ ಅಂತಿಮ್‌, ‘ಸಣ್ಣ ಗೊಂದಲದಿಂದ ಹೀಗಾಗಿದೆ. ನಾನು ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಮಾಡಿಲ್ಲ’ ಎಂದಿದ್ದಾರೆ. ವಿಪರೀತ ಜ್ವರ ಇದ್ದ ಕಾರಣ ನಾನು ಹೋಟೆಲ್‌ಗೆ ತೆರಳಿದ್ದೆ. 

ನನಗೆ ಕೆಲ ಸಾಮಾಗ್ರಿಗಳು ಅಗತ್ಯವಿತ್ತು. ಹೀಗಾಗಿ ನನ್ನ ಕಾರ್ಡ್ ಪಡೆದಿದ್ದ ಸಹೋದರಿ ಕ್ರೀಡಾ ಗ್ರಾಮದ ಗೇಟ್‌ ಬಳಿ ತೆರಳಿ, ಒಳ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಜೊತೆ ಅನುಮತಿ ಕೇಳಿದ್ದಾಳೆ. ಅವರು ಐಡಿ ಕಾರ್ಡ್‌ ಪರಿಶೀಲನೆಗಾಗಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ’ ಎಂದಿದ್ದಾರೆ.

 ಅಲ್ಲದೆ, ಕೋಚ್‌ಗಳು ಮದ್ಯ ಸೇವಿಸಿದ್ದರು ಹಾಗೂ ಕ್ಯಾಬ್‌ ಚಾಲಕನಿಗೆ ಹಣ ಕೊಡದೆ ವಂಚಿಸಿದ್ದಾರೆ ಎಂಬ ಸುದ್ದಿಯನ್ನು ಅಂತಿಮ್‌ ಅಲ್ಲಗಳೆದಿದ್ದಾರೆ. ಯಾವುದೇ ವದಂತಿ ಹರಡಬೇಡಿ, ದಯವಿಟ್ಟು ನನ್ನನ್ನು ಬೆಂಬಲಿಸಿ ಎಂದು ಅವರು ವಿನಂತಿಸಿದ್ದಾರೆ.