ಕೋಪಾ ಅಮೆರಿಕ ಫುಟ್ಬಾಲ್‌: 16ನೇ ಬಾರಿ ಅರ್ಜೆಂಟೀನಾ ಚಾಂಪಿಯನ್‌

| Published : Jul 16 2024, 12:35 AM IST / Updated: Jul 16 2024, 04:28 AM IST

ಕೋಪಾ ಅಮೆರಿಕ ಫುಟ್ಬಾಲ್‌: 16ನೇ ಬಾರಿ ಅರ್ಜೆಂಟೀನಾ ಚಾಂಪಿಯನ್‌
Share this Article
  • FB
  • TW
  • Linkdin
  • Email

ಸಾರಾಂಶ

ಫೈನಲ್‌ನಲ್ಲಿ ಕೊಲಂಬಿಯಾ ವಿರುದ್ಧ 1-0 ಗೆಲುವು. 112ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಲಾಟರೊ ಮಾರ್ಟಿನೆಜ್‌ ಅರ್ಜೆಂಟೀನಾ ತಂಡ ಸತತ 2ನೇ ಬಾರಿ ಚಾಂಪಿಯನ್‌ ಆಗಲು ಕಾರಣರಾದರು.

ಮಯಾಮಿ(ಅಮೆರಿಕ): ದಕ್ಷಿಣ ಅಮೆರಿಕದ ತಂಡಗಳ ನಡುವಿನ ಫುಟ್ಬಾಲ್‌ ಟೂರ್ನಿಯಾಗಿರುವ ಕೋಪಾ ಅಮೆರಿಕ ಚಾಂಪಿಯನ್‌ಶಿಪ್‌ನಲ್ಲಿ ಅರ್ಜೆಂಟೀನಾ 16ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಲಿಯೋನಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಹಾಲಿ ವಿಶ್ವ ಚಾಂಪಿಯನ್‌ ಅರ್ಜೆಂಟೀನಾ, ಸೋಮವಾರ ನಡೆದ ಫೈನಲ್‌ ಹಣಾಹಣಿಯಲ್ಲಿ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿತು. ನಿಗದಿತ ಅವಧಿ ಗೋಲುರಹಿತವಾಗಿ ಮುಕ್ತಾಯಗೊಂಡ ಬಳಿಕ ಹೆಚ್ಚುವರಿ ಸಮಯ ನೀಡಲಾಯಿತು. 112ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಲಾಟರೊ ಮಾರ್ಟಿನೆಜ್‌ ಅರ್ಜೆಂಟೀನಾ ತಂಡ ಸತತ 2ನೇ ಬಾರಿ ಚಾಂಪಿಯನ್‌ ಆಗಲು ಕಾರಣರಾದರು. ಈ ಸೋಲಿನೊಂದಿಗೆ ಕೊಲಂಬಿಯಾದ 28 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್‌ ಬಿತ್ತು.

ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

ಪಂದ್ಯದ 64ನೇ ನಿಮಿಷದಲ್ಲಿ ಮೆಸ್ಸಿ ಗಾಯಗೊಂಡ ಕಾರಣ ಮೈದಾನ ತೊರೆಯುವಂತಾಯಿತು. ಬಳಿಕ ಅವರು ಡಗೌಟ್‌ನಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯಗಳ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಉರುಗ್ವೆ ದಾಖಲೆ ಮುರಿದ ಅರ್ಜೆಂಟೀನಾ

ಅರ್ಜೆಂಟೀನಾ ಈ ಗೆಲುವಿನೊಂದಿಗೆ ಅತಿ ಹೆಚ್ಚು ಬಾರಿ ಚಾಂಪಿಯನ್‌ ಆದ ಉರುಗ್ವೆ ದಾಖಲೆನ್ನು ಮುರಿಯಿತು. ಉರುಗ್ವೆ 15 ಬಾರಿ ಚಾಂಪಿಯನ್‌ ಆಗಿದ್ದರೆ, ಅರ್ಜೆಂಟೀನಾ 16ನೇ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಅರ್ಜೆಂಟೀನಾ 14 ಬಾರಿ ಫೈನಲ್‌ನಲ್ಲಿ ಸೋತಿದೆ.