ಸಾರಾಂಶ
ಅಶ್ವಿನ್ ಪ್ರತಿ ಪಂದ್ಯದಲ್ಲೂ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗರ ಪಾಲಿಗೆ ಸೇರಿರುವ ಅವರು, ಈಗ ಟೆಸ್ಟ್‌ನಲ್ಲಿ ತಂಡವೊಂದರ ವಿರುದ್ಧ 1000 ರನ್, 100 ವಿಕೆಟ್ ಸಾಧಕ ಮಾಡಿದ ವಿಶ್ವದ 7ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಂಚಿ: ಭಾರತದ ಮಾಂತ್ರಿಕ ಸ್ಪಿನ್ನರ್ ಆರ್.ಆಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬೇರ್‌ಸ್ಟೋವ್‌ರನ್ನು ಔಟ್ ಮಾಡಿದ ಅಶ್ವಿನ್, ಇಂಗ್ಲೆಂಡ್ ವಿರುದ್ಧ ಟೆಸ್ಟ್ ವಿಕೆಟ್ ಗಳಿಕೆಯನ್ನು 100ಕ್ಕೆ ಏರಿಸಿದರು.
ಈ ಮೂಲಕ ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್, 100ಕ್ಕೂ ಹೆಚ್ಚು ವಿಕೆಟ್ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ತಂಡವೊಂದರ ವಿರುದ್ಧ ಈ ಮೈಲಿಗಲ್ಲು ಸಾಧಿಸಿದ ವಿಶ್ವದ 7ನೇ ಆಟಗಾರ. ಈ ಮೊದಲು ಆಸ್ಟ್ರೇಲಿಯಾದ ಜಾರ್ಜ್ ಗಿಫೆನ್, ಮೋಂಟಿ ನೋಬ್ಲೆ, ಇಂಗ್ಲೆಂಡ್‌ನ ವಿಲ್ಫ್ರೆಡ್ ರೋಡ್ಸ್, ವೆಸ್ಟ್‌ಇಂಡೀಸ್‌ನ ಗ್ಯಾರಿ ಸೋಬರ್ಸ್, ಇಂಗ್ಲೆಂಡ್‌ನ ಇಯಾನ್ ಬೋಥಂ, ಸ್ಟುವರ್ಟ್ ಬ್ರಾಡ್ ಕೂಡಾ ಟೆಸ್ಟ್‌ನಲ್ಲಿ ತಂಡವೊಂದರ ವಿರುದ್ಧ 1000+ ರನ್, 100+ ವಿಕೆಟ್ ಸಾಧಕ ಮಾಡಿದ್ದಾರೆ.ಜೊತೆಗೆ 2 ತಂಡಗಳ ವಿರುದ್ಧ ಟೆಸ್ಟ್‌ನಲ್ಲಿ 100+ ವಿಕೆಟ್ ಕಿತ್ತ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೂ ಅಶ್ವಿನ್ ಒಳಗಾಗಿದ್ದಾರೆ. ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ ಕೂಡಾ ಈ ಸಾಧನೆ ಮಾಡಿದ್ದಾರೆ. ಇನ್ನು, ಅನಿಲ್ ಕುಂಬ್ಳೆ ಆಸ್ಟ್ರೇಲಿಯಾ ವಿರುದ್ಧ 100+ ವಿಕೆಟ್ ಪಡೆದಿದ್ದಾರೆ.