ಸಾರಾಂಶ
ನವದೆಹಲಿ: ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ‘ಐ ಹ್ಯಾವ್ ದಿ ಸ್ಟ್ರೀಟ್ಸ್-ಎ ಕುಟ್ಟಿ ಕ್ರಿಕೆಟ್ ಸ್ಟೋರಿ’ ಎನ್ನುವ ಹೆಸರಿನ ತಮ್ಮ ಆತ್ಮಕಥನವನ್ನು ಬಿಡುಗಡೆಗೊಳಿಸಿದ್ದು, ತಮ್ಮ ಕ್ರಿಕೆಟ್ ಬದುಕಿನ ಹಲವು ರೋಚಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಎಂ.ಎಸ್.ಧೋನಿಯೊಂದಿಗೆ ನಡೆದ ಪ್ರಸಂಗವೊಂದನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಶ್ವಿನ್, ಧೋನಿ ಆಟದ ನಡುವೆಯೂ ಹೇಗೆ ತಮ್ಮ ಎಲ್ಲ ಸಹ ಆಟಗಾರರ ಮೇಲೆ ಕಣ್ಣಿಡುತ್ತಿದ್ದರು ಎನ್ನುವುದನ್ನು ಬರೆದಿದ್ದಾರೆ. ‘2010ರಲ್ಲಿ ದ.ಆಫ್ರಿಕಾ ಪ್ರವಾಸದ ವೇಳೆ ಪಂದ್ಯವೊಂದರಲ್ಲಿ ಶ್ರೀಶಾಂತ್ ಮೀಸಲು ಆಟಗಾರರಾಗಿದ್ದರು. ಉಳಿದ ಮೀಸಲು ಆಟಗಾರರ ಜೊತೆ ಡಗೌಟ್‌ನಲ್ಲಿ ಕೂರುವಂತೆ ಶ್ರೀಶಾಂತ್‌ಗೆ ಧೋನಿ ಸೂಚಿಸಿದ್ದರು.
ಆದರೆ ಶ್ರೀಶಾಂತ್, ಡ್ರೆಸ್ಸಿಂಗ್ ಕೋಣೆಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ನಾನು ಡ್ರಿಂಕ್ಸ್ ತೆಗೆದುಕೊಂಡು ಹೋದಾಗ ಶ್ರೀಶಾಂತ್ ಎಲ್ಲಿ ಎಂದು ಕೇಳಿದರು. ಡ್ರೆಸ್ಸಿಂಗ್ ರೂಂನಲ್ಲಿದ್ದಾರೆ ಎಂದೆ. ರಂಜೀಬ್ ಸರ್ (ತಂಡದ ಮ್ಯಾನೇಜರ್)ಗೆ ಶ್ರೀಶಾಂತ್‌ರನ್ನು ನಾಳೆಯೇ ಭಾರತಕ್ಕೆ ವಾಪಸ್ ಕಳುಹಿಸಿ ಎಂದು ಹೇಳು ಎಂದು ನನಗೆ ಧೋನಿ ಸೂಚಿಸಿದ್ದರು’ ಎಂದು ಅಶ್ವಿನ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಮಾರ್ಕೆಲ್‌ರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲು ಗಂಭೀರ್ ಕೋರಿಕೆ
ನವದೆಹಲಿ: ಭಾರತ ತಂಡದ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮಾರ್ಕೆಲ್ ಅವರನ್ನು ನೇಮಿಸುವಂತೆ ಬಿಸಿಸಿಐಗೆ ಪ್ರಧಾನ ಕೋಚ್ ಗೌತಮ್ ಗಂಭೀರ್ ಕೋರಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಗಂಭೀರ್ ಐಪಿಎಲ್‌ನ ಲಖನೌ ಸೂಪರ್ ಜೈಂಟ್ಸ್ ಮಾರ್ಗದರ್ಶಕರಾಗಿದ್ದಾಗ ಮಾರ್ಕೆಲ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಈ ನಡುವೆ ಬಿಸಿಸಿಐ ಭಾರತದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲು ಚಿಂತನೆ ನಡೆಸುತ್ತಿದೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಶೀಘ್ರವೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.