ಏಷ್ಯನ್‌ ಅಥ್ಲೆಟಿಕ್ಸ್‌: ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದ ಜ್ಯೋತಿ

| Published : Feb 18 2024, 01:30 AM IST

ಏಷ್ಯನ್‌ ಅಥ್ಲೆಟಿಕ್ಸ್‌: ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದ ಜ್ಯೋತಿ
Share this Article
  • FB
  • TW
  • Linkdin
  • Email

ಸಾರಾಂಶ

ಏಷ್ಯನ್‌ ಒಳಾಂಗಣ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಹರ್ಡಲ್ಸ್‌ನಲ್ಲಿ ಭಾರತದ ತಾರಾ ಓಟಗಾರ್ತಿ ಜ್ಯೋತಿ ಯರ್ರಾಜಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಟೆಹ್ರಾನ್‌(ಇರಾನ್‌): ಏಷ್ಯನ್‌ ಒಳಾಂಗಣ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಹರ್ಡಲ್ಸ್‌ನಲ್ಲಿ ಭಾರತದ ತಾರಾ ಓಟಗಾರ್ತಿ ಜ್ಯೋತಿ ಯರ್ರಾಜಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.ಶನಿವಾರ ನಡೆದ ಮಹಿಳೆಯರ 60 ಮೀಟರ್‌ ಹರ್ಡಲ್ಸ್‌ನಲ್ಲಿ 8.12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಜ್ಯೋತಿ ಯರ್ರಾಜಿ ಬಂಗಾರದ ಸಾಧನೆ ಮಾಡಿದರು. ಅಲ್ಲದೆ ಅವರು ಈ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡರು. 2022ರ ಏಷ್ಯನ್‌ ಗೇಮ್ಸ್‌ 100 ಮೀ. ಹರ್ಡಲ್ಸ್‌ನ ಬೆಳ್ಳಿ ಪದಕ ವಿಜೇತೆ 24 ವರ್ಷದ ಜ್ಯೋತಿ ಕಳೆದ ವರ್ಷ ಇದೇ ಟೂರ್ನಿಯಲ್ಲಿ 8.13 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು. ಅಂದಿನ ಸ್ಪರ್ಧೆಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಜ್ಯೋತಿ ಈ ಬಾರಿ ಚಿನ್ನ ಗೆಲ್ಲಲು ಯಶಸ್ವಿಯಾದರು. ಕಳೆದ ವರ್ಷ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್‌ ಹೊರಾಂಗಣ ಚಾಂಪಿಯನ್‌ಶಿಪ್‌ನಲ್ಲಿ ಜ್ಯೋತಿ 100 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.ಇದೇ ವೇಳೆ ಮಹಿಳೆಯರ 1500 ಮೀಟರ್‌ ಓಟದ ಸ್ಪರ್ಧೆಯಲ್ಲಿ 4 ನಿಮಿಷ 29.55 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಹರ್ಮಿಲನ್‌ ಬೇನ್ಸ್‌ ಚಿನ್ನದ ಪದಕವನ್ನು ತಮ್ಮ ಮಡಿಲಿಗೆ ಹಾಕಿಕೊಂಡರು.