ಸಾರಾಂಶ
ಮೆಲ್ಬರ್ನ್: ಬೆಲಾರಸ್‌ನ ಅರೈನಾ ಸಬಲೆಂಕಾ, ಸತತ 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಚೀನಾದ ಝೆಂಗ್ ಕಿನ್ವೆನ್ ವಿರುದ್ಧ 6-3, 6-2 ಸೆಟ್‌ಗಳಲ್ಲಿ ಸುಲಭ ಜಯ ದಾಖಲಿಸಿದರು.ಟೂರ್ನಿಯುದ್ದಕ್ಕೂ ಒಂದೂ ಸೆಟ್ ಸೋಲದೆ ಸಬಲೆಂಕಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ವಿಶೇಷ. ಫೈನಲ್‌ನಲ್ಲೂ ಬೆಲಾರಸ್ ಆಟಗಾರ್ತಿಯ ವೇಗ, ಬಲವಾದ ಸರ್ವ್, ರಿಟರ್ನ್ಸ್‌ಗೆ ಝೆಂಗ್ ಬಳಿ ಉತ್ತರವಿರಲಿಲ್ಲ. ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಫೈನಲ್ ಆಡಿದ 21 ವರ್ಷದ ಝೆಂಗ್, ಈ ಹಂತದಲ್ಲಿ ಅನನುಭವಿ ಎನ್ನುವುದು ಸ್ಪಷ್ಟವಾಗಿ ತೋರುತಿತ್ತು. ಅವರು ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-50ರೊಳಗೆ ಸ್ಥಾನ ಪಡೆದಿರುವ ಆಟಗಾರ್ತಿಯನ್ನು ಎದುರಿಸಿದರು. ಝೆಂಗ್ ವಿರುದ್ಧ ಕಳೆದ ವರ್ಷ ಯುಎಸ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲೂ ಸಬಲೆಂಕಾ ಜಯಭೇರಿ ಬಾರಿಸಿದ್ದರು.ಕಳೆದ ವರ್ಷ ಫೈನಲ್‌ನಲ್ಲಿ ಎಲೈನಾ ರಬೈಕೆನಾ ವಿರುದ್ಧ ಜಯಗಳಿಸಿ ಪ್ರಶಸ್ತಿ ಗೆದ್ದಿದ್ದರು. 2012, 2013ರಲ್ಲಿ ವಿಕ್ಟೋರಿಯಾ ಅಜರೆಂಕಾ ಬಳಿಕ ಸತತ 2 ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಸಬಲೆಂಕಾ ಪಾತ್ರರಾದರು.