ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ಗೆ ಸಬಲೆಂಕಾ, ಕೀಸ್‌ : 8 ವರ್ಷ ಬಳಿಕ ಗ್ರ್ಯಾನ್‌ ಸ್ಲಾಂ ಫೈನಲ್‌ಗೆ

| Published : Jan 24 2025, 12:45 AM IST / Updated: Jan 24 2025, 04:12 AM IST

ಸಾರಾಂಶ

ಸೆಮೀಸ್‌ನಲ್ಲಿ ಪೌಲಾ ಬಡೋಸಾ ವಿರುದ್ಧ ಗೆದ್ದ ಸಬಲೆಂಕಾ. ಸತತ 3ನೇ ಫೈನಲ್‌ಗೆ ಲಗ್ಗೆ. ಇಗಾ ಸ್ವಿಯಾಟೆಕ್‌ಗೆ ಆಘಾತ ಡಿದ ಅಮೆರಿಕದ ಮ್ಯಾಡಿಸನ್‌ ಕೀಸ್‌. 8 ವರ್ಷ ಬಳಿಕ ಗ್ರ್ಯಾನ್‌ ಸ್ಲಾಂ ಫೈನಲ್‌ಗೆ.

ಮೆಲ್ಬರ್ನ್‌: ವಿಶ್ವ ನಂ.1 ಅರೈನಾ ಸಬಲೆಂಕಾ ಸತತ 3ನೇ ಬಾರಿಗೆ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ಗೆ ಲಗ್ಗೆಯಿಟ್ಟರೆ, ವಿಶ್ವ ನಂ.2 ಇಗಾ ಸ್ವಿಯಾಟೆಕ್‌ ಸೆಮಿಫೈನಲ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸಿ ಹೊರಬಿದ್ದಿದ್ದಾರೆ.

ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ ಮೊದಲ ಸೆಮಿಫೈನಲ್‌ನಲ್ಲಿ 2 ಬಾರಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, ಬೆಲಾರುಸ್‌ನ ಸಬಲೆಂಕಾ 6-4, 6-2 ನೇರ ಸೆಟ್‌ಗಳಲ್ಲಿ ತಮ್ಮ ಆಪ್ತ ಸ್ನೇಹಿತೆ, ಸ್ಪೇನ್‌ನ ಪೌಲಾ ಬಡೋಸಾರನ್ನು ಮಣಿಸಿದರು. ಹ್ಯಾಟ್ರಿಕ್‌ ಚಾಂಪಿಯನ್‌ಶಿಪ್‌ ಮೇಲೆ ಕಣ್ಣಿಟ್ಟಿರುವ ಸಬಲೆಂಕಾ, ತಮ್ಮ ಫೈನಲ್‌ ಹಾದಿಯಲ್ಲಿ ಕೇವಲ 1 ಸೆಟ್‌ ಮಾತ್ರ ಸೋತಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿದ್ದಾರೆ.

2ನೇ ಸೆಮಿಫೈನಲ್‌ನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ಗೆ 19ನೇ ಶ್ರೇಯಾಂಕಿತೆ ಅಮೆರಿಕದ ಮ್ಯಾಡಿಸನ್‌ ಕೀಸ್‌ರಿಂದ ಪ್ರಬಲ ಪೈಪೋಟಿ ಎದುರಾಯಿತು.

ಒಂದೂ ಸೆಟ್‌ ಸೋಲದೆ ಸೆಮಿಫೈನಲ್‌ಗೇರಿದ್ದ ಸ್ವಿಯಾಟೆಕ್‌, 7-5ರಲ್ಲಿ ಮೊದಲ ಸೆಟ್‌ ಗೆದ್ದು ಸುಲಭವಾಗಿ ಪಂದ್ಯ ಜಯಿಸುವ ನಿರೀಕ್ಷೆ ಮೂಡಿಸಿದರು. ಆದರೆ, 2ನೇ ಸೆಟ್‌ನಲ್ಲಿ ಮ್ಯಾಡಿಸನ್‌ ಕೀಸ್‌ರಿಂದ ಅಮೋಘ ಆಟ ಮೂಡಿಬಂತು. 6-1ರಲ್ಲಿ ಸೆಟ್‌ ಗೆದ್ದು ಸಮಬಲ ಸಾಧಿಸಿದ ಕೀಸ್‌, ಪಂದ್ಯವನ್ನು ನಿರ್ಣಾಯಕ 3ನೇ ಸೆಟ್‌ಗೆ ಕೊಂಡೊಯ್ದರು.

3ನೇ ಸೆಟ್‌ನಲ್ಲೂ ಉಭಯ ಆಟಗಾರ್ತಿಯರ ನಡುವೆ ಭರ್ಜರಿ ಪೈಪೋಟಿ ಕಂಡುಬಂತು. 6-5 ಗೇಮ್‌ಗಳಲ್ಲಿ ಮುಂದಿದ್ದ ಸ್ವಿಯಾಟೆಕ್‌ 40-30 ಅಂಕಗಳನ್ನು ಪಡೆದು ಮ್ಯಾಚ್‌ ಪಾಯಿಂಟ್‌ ಹೊಂದಿದ್ದರು. ಆದರೆ ಆಕರ್ಷಕ ಕಮ್‌ಬ್ಯಾಕ್‌ ಮಾಡಿದ ಕೀಸ್‌, 6-6ರಲ್ಲಿ ಸಮಬಲ ಸಾಧಿಸಿದರು. ಇದರಿಂದಾಗಿ ಫಲಿತಾಂಶಕ್ಕಾಗಿ ಟೈ ಬ್ರೇಕರ್‌ ಮೊರೆ ಹೋಗಲಾಯಿತು.

ಟೈ ಬ್ರೇಕರ್‌ನಲ್ಲಿ ಯಾರು ಮೊದಲು 10 ಅಂಕ (2 ಅಂಕ ವ್ಯತ್ಯಾಸದೊಂದಿಗೆ) ಗಳಿಸುತ್ತಾರೋ ಅವರು ವಿಜೇತರು ಎಂದು ಘೋಷಿಸಲಾಗುತ್ತದೆ. ಕೀಸ್‌ 10-8 ಅಂಕಗಳಲ್ಲಿ ಟೈ ಬ್ರೇಕರ್‌ ತಮ್ಮದಾಗಿಸಿಕೊಂಡು 2-1 ಸೆಟ್‌ಗಳಲ್ಲಿ ಪಂದ್ಯ ಗೆದ್ದು, 8 ವರ್ಷ ಬಳಿಕ ಗ್ರ್ಯಾನ್‌ ಸ್ಲಾಂ ಫೈನಲ್‌ಗೆ ಲಗ್ಗೆಯಿಟ್ಟರು. 2017ರ ಯುಎಸ್‌ ಓಪನ್‌ನಲ್ಲಿ ಕೀಸ್‌ ರನ್ನರ್‌-ಅಪ್‌ ಆಗಿದ್ದರು. ಇಂದು ಪುರುಷರ ಸಿಂಗಲ್ಸ್‌ ಸೆಮೀಸ್‌: ಶುಕ್ರವಾರ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ಗಳು ನಡೆಯಲಿದ್ದು, ನೋವಾಕ್‌ ಜೋಕೋವಿಚ್‌-ಅಲೆಕ್ಸಾಂಡರ್‌ ಜ್ವೆರೆವ್, ಬೆನ್‌ ಶೆಲ್ಟನ್‌-ಯಾನ್ನಿಕ್‌ ಸಿನ್ನರ್‌ ಮುಖಾಮುಖಿಯಾಗಲಿದ್ದಾರೆ.