ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ: ಜೋಕೋವಿಚ್‌ vs ಕಾರ್ಲೊಸ್‌ ಆಲ್ಕರಜ್‌ ಮೆಗಾ ಫೈಟ್‌

| Published : Jan 21 2025, 12:33 AM IST / Updated: Jan 21 2025, 04:13 AM IST

ಸಾರಾಂಶ

ರಬೈಕೆನಾಗೆ ನಾಲ್ಕನೇ ಸುತ್ತಲ್ಲಿ ಸೋಲು. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಯಾನಿಕ್‌ ಸಿನ್ನರ್‌, ಇಗಾ ಸ್ವಿಯಾಟೆಕ್‌. ಇಂದಿನಿಂದ ಕ್ವಾರ್ಟರ್‌ ಫೈನಲ್ ಸೆಣಸಾಟ.

ಮೆಲ್ಬರ್ನ್: ಹಾಲಿ ಚಾಂಪಿಯನ್‌, ವಿಶ್ವ ನಂ.1 ಟೆನಿಸಿಗ ಯಾನ್ನಿಕ್‌ ಸಿನ್ನರ್‌ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಚೊಚ್ಚಲ ಆಸ್ಟ್ರೇಲಿಯನ್‌ ಓಪನ್ ಮೇಲೆ ಕಣ್ಣಿಟ್ಟಿರುವ ಪೋಲೆಂಡ್ ತಾರೆ ಇಗಾ ಸ್ವಿಯಾಟೆಕ್‌ ಕೂಡಾ ಅಂತಿಮ 8ರ ಘಟ್ಟ ತಲುಪಿದ್ದಾರೆ.

2 ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತ, ಇಟಲಿಯ ತಾರಾ ಟೆನಿಸಿಗ ಸಿನ್ನರ್‌ ಸೋಮವಾರ ನಡೆದ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ 13ನೇ ಶ್ರೇಯಾಕಿತ, ಡೆನ್ಮಾರ್ಕ್‌ನ ಹೋಲ್ಗರ್‌ ರ್‍ಯುನ್‌ ವಿರುದ್ಧ 6-3, 3-6, 6-3, 6-2 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಮೊದಲೆರಡು ಸೆಟ್‌ಗಳಲ್ಲಿ ಉಭಯ ಆಟಗಾರರಿಂದ ಸಮಬಲದ ಹೋರಾಟ ಕಂಡುಬಂದರೂ, 3ನೇ ಮತ್ತು 4ನೇ ಸೆಟ್‌ನಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಿದ 23 ವರ್ಷದ ಸಿನ್ನರ್‌, 3ನೇ ಬಾರಿ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. 

ಇದರೊಂದಿಗೆ ಮೊದಲ ಬಾರಿ ಟೂರ್ನಿಯಲ್ಲಿ ಕ್ವಾರ್ಟರ್‌ಗೇರುವ 21ರ ಹೋಲ್ಗರ್‌ ಕನಸು ಭಗ್ನಗೊಂಡಿತು.ಇನ್ನು, ಆಸ್ಟ್ರೇಲಿಯಾದ 8ನೇ ಶ್ರೇಯಾಂಕಿತ ಅಲೆಕ್ಸ್‌ ಡಿ ಮಿನೌರ್‌ ಅವರು ಅಮೆರಿಕದ ಶ್ರೇಯಾಂಕ ರಹಿತ ಅಲೆಕ್ಸ್‌ ಮಿಚೆಲ್ಸನ್‌ ವಿರುದ್ಧ 6-0, 7-6(7/5), 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಸಿನ್ನರ್‌ಗೆ ಮಿನೌರ್ ಸವಾಲು ಎದುರಾಗಲಿದೆ. ಇದೇ ವೇಳೆ ಅಮೆರಿಕದ 21ನೇ ಶ್ರೇಯಾಂಕಿತ ಬೆನ್ ಶೆಲ್ಟನ್‌, ಶ್ರೇಯಾಂಕ ರಹಿತ ಇಟಲಿಯ ಲೊರೆಂಜೊ ಸೊನೆಗೊ ಕೂಡಾ ಕ್ವಾರ್ಟರ್‌ ಫೈನಲ್‌ಗೇರಿದರು.

ಇಗಾ ಅಬ್ಬರ: 5 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಸ್ವಿಯಾಟೆಕ್‌ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಪ್ರವೇಶಿಸಿದರು. 4ನೇ ಸುತ್ತಿನಲ್ಲಿ 23 ವರ್ಷದ ಸ್ವಿಯಾಟೆಕ್‌ಗೆ ಜರ್ಮನಿಯ ಎವಾ ಲಿಸ್‌ ವಿರುದ್ಧ 6-0, 6-1 ಸೆಟ್‌ಗಳ ಸುಲಭ ಗೆಲುವು ಲಭಿಸಿತು. ಅಮೆರಿಕದ 8ನೇ ಶ್ರೇಯಾಂಕಿತ ಎಮ್ಮಾ ನವರೊ, 28ನೇ ಶ್ರೇಯಾಂಕಿತ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು.ಆದರೆ 2022ರ ವಿಂಬಲ್ಡನ್‌ ಚಾಂಪಿಯನ್, ಕಜಕಸ್ತಾನದ 6ನೇ ಶ್ರೇಯಾಂಕಿತೆ ಎಲೆನಾ ರಬೈಕೆನಾ 4ನೇ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದರು. ಅವರಿಗೆ ಅಮೆರಿಕದ 19ನೇ ಶ್ರೇಯಾಂಕಿತ ಮ್ಯಾಡಿಸನ್‌ ಕೀಸ್‌ ವಿರುದ್ಧ 3-6, 6-1, 3-6 ಸೆಟ್‌ಗಳಲ್ಲಿ ಸೋಲು ಎದುರಾಯಿತು.

ಆಲ್ಕರಜ್‌ ಸವಾಲು ಗೆಲ್ತಾರಾ ಜೋಕೋ?

ಈ ಬಾರಿ ಟೂರ್ನಿಯ ಅತ್ಯಂತ ಪ್ರಮುಖ ಪಂದ್ಯ ಪೈನಲ್‌ಗೂ ಮುನ್ನವೇ ನಡೆಯಲಿದೆ. ಮಂಗಳವಾರ 10 ಬಾರಿ ಚಾಂಪಿಯನ್‌, ಸರ್ಬಿಯಾದ ಜೋಕೋವಿಚ್‌ ಹಾಗೂ ಅವರ ಪ್ರಮುಖ ಎದುರಾಳಿ, ಟೆನಿಸ್‌ ಲೋಕದ ಹೊಸ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. 37 ವರ್ಷದ ಜೋಕೋ ಹಾಗೂ 21ರ ಆಲ್ಕರಜ್‌ ಈ ವರೆಗೂ 7 ಬಾರಿ ಪರಸ್ಪರ ಸೆಣಸಾಡಿದ್ದಾರೆ. ಈ ಪೈಕಿ ಜೋಕೋ 4ರಲ್ಲಿ ಗೆದ್ದಿದ್ದರೆ, ಉಳಿದ 3 ಪಂದ್ಯಗಳಲ್ಲಿ ಆಲ್ಕರಜ್‌ ಜಯಗಳಿಸಿದ್ದಾರೆ. ಕಳೆದೆರಡು ವಿಂಬಲ್ಡನ್‌ ಟೂರ್ನಿ ಫೈನಲ್‌ನಲ್ಲೂ ಜೋಕೋವಿಚ್‌ರನ್ನು ಆಲ್ಕರಜ್‌ ಸೋಲಿಸಿದ್ದರು.