ಸಾರಾಂಶ
ಮೆಲ್ಬರ್ನ್: ಫೆ.19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾಕ್ಕೆ ದೊಡ್ಡ ಆಘಾತ ಎದುರಾಗಿದೆ. ಕೆಲ ಆಟಗಾರರು ಗಾಯಕ್ಕೆ ತುತ್ತಾಗಿರುವ ನಡುವೆಯೇ ತಾರಾ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಏಕದಿನ ಕ್ರಿಕೆಟ್‌ನಿಂದಲೇ ನಿವೃತ್ತಿಯಾಗಿದ್ದಾರೆ.
ಸ್ಟೋಯ್ನಿಸ್ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಗುರುವಾರ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಸ್ಟೋಯ್ನಿಸ್ ಈ ವರೆಗೂ ಟೆಸ್ಟ್ ಆಡಿಲ್ಲ. ಆದರೆ ಟಿ20ಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಅವರು ಈ ವರೆಗೂ ಆಸೀಸ್ ಪರ 71 ಪಂದ್ಯಗಳನ್ನಾಡಿದ್ದಾರೆ.
ಸ್ಟಾರ್‌ಗಳು ಔಟ್: ತಂಡದ ಪ್ರಮುಖ ಬೌಲರ್‌ಗಳಾದ ನಾಯಕ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಮಿನ್ಸ್ ಭಾರತ ವಿರುದ್ಧ ಟೆಸ್ಟ್ ಸರಣಿ ವೇಳೆ ಪಾದ ಗಾಯಕ್ಕೆ ತುತ್ತಾಗಿದ್ದರು.
ಮತ್ತೊಂದೆಡೆ ಹೇಜಲ್‌ವುಡ್ ಸ್ನಾಯುಸೆಳೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಈಗಾಗಲೇ ಆಲ್ರೌಂಡರ್ ಮಿಚೆಲ್ ಮಾರ್ಷ್ ಕೂಡಾ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.ಟೂರ್ನಿಗೆ ಆಸೀಸ್ ತಂಡ ಘೋಷಣೆಯಾಗಿದ್ದರೂ, ಫೆ.12ರ ವರೆಗೂ ತಂಡದಲ್ಲಿ ಬದಲಾವಣೆ ಮಾಡುವ ಅವಕಾಶವಿದೆ.