ಸಾರಾಂಶ
ಬೆಂಗಳೂರು: ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಆರ್‌ಸಿಬಿ ಹಾಗೂ ಚೆನ್ನೈ ನಡುವಿನ ಬಹುನಿರೀಕ್ಷಿತ ಐಪಿಎಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಶನಿವಾರ ನಗರದಲ್ಲಿ ಮಳೆ ಸುರಿಯಲಿದೆ.ಸದ್ಯ ಆರ್‌ಸಿಬಿಗೆ ಈ ಪಂದ್ಯದಲ್ಲೇ ಗೆಲ್ಲಲೇಬೇಕಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ತಂಡಕ್ಕೆ ಸಂಕಷ್ಟ ಎದುರಾಗಲಿದೆ.
ಆರ್‌ಸಿಬಿ ಪ್ಲೇ-ಆಫ್‌ಗೇರಬೇಕಿದ್ದರೆ ಈ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ಸೋತರೆ ಅಥವಾ ಮಳೆಯಿಂದ ಪಂದ್ಯ ರದ್ದಾದರೆ ಪ್ಲೇ-ಆಫ್‌ನಿಂದ ಹೊರಬೀಳಲಿದೆ. ಇನ್ನು, ಮಳೆ ಅಡ್ಡಿಪಡಿಸದೆ 20 ಓವರ್ ಪಂದ್ಯ ನಡೆದರೆ, ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 200 ರನ್ ಗಳಿಸಿ, ಚೆನ್ನೈಯನ್ನು 182ಕ್ಕೆ ನಿಯಂತ್ರಿಸಬೇಕು.
10 ಓವರ್ ಪಂದ್ಯ ನಡೆದರೆ 130 ರನ್ ಗಳಿಸಿ, ಚೆನ್ನೈಯನ್ನು 112 ರನ್‌ಗೆ ಕಟ್ಟಿಹಾಕಬೇಕು. 5 ಓವರ್ ಪಂದ್ಯ ನಡೆದರೆ ಆರ್‌ಸಿಬಿ 80 ರನ್ ಗಳಿಸಿ, ಚೆನ್ನೈಯನ್ನು 62ಕ್ಕೆ ನಿಯಂತ್ರಿಸಬೇಕಾದ ಅಗತ್ಯವಿದೆ. ಇದೇ ವೇಳೆ ಚೆನ್ನೈ ಮೊದಲು ಬ್ಯಾಟ್ ಮಾಡಿದರೆ, 20 ಓವರ್ ಪಂದ್ಯದಲ್ಲಿ 201 ರನ್ ಗುರಿಯನ್ನು ಆರ್‌ಸಿಬಿ 18.1 ಓವರಲ್ಲಿ ಗೆಲ್ಲಬೇಕು. 10 ಓವರ್ ಪಂದ್ಯ ನಡೆದರೆ 131ಕ್ಕೆ ಚೆನ್ನೈಯನ್ನು ನಿಯಂತ್ರಿಸಿ, ಆ ಮೊತ್ತವನ್ನು 8.1 ಓವರಲ್ಲೇ ಬೆನ್ನತ್ತಬೇಕು. 5 ಓವರ್ ಪಂದ್ಯ ನಡೆದರೆ ಚೆನ್ನೈನ 81 ರನ್ ಗುರಿಯನ್ನು ಆರ್‌ಸಿಬಿ ಕೇವಲ 3.1 ಓವರಲ್ಲೇ ಬೆನ್ನತ್ತಿ ಗೆಲ್ಲಬೇಕು.