ಬಾಗ್ಡಾನ್ ಬೊಬ್ರಾವ್‌ ಮುಡಿಗೆ ದಾವಣಗೆರೆ ಓಪನ್ ಪ್ರಶಸ್ತಿ

| Published : Oct 30 2023, 12:30 AM IST

ಬಾಗ್ಡಾನ್ ಬೊಬ್ರಾವ್‌ ಮುಡಿಗೆ ದಾವಣಗೆರೆ ಓಪನ್ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ನಿಕ್‌ ಚಾಪೆಲ್ ವಿರುದ್ಧ 6-3, 7-6(7-4) ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಬಾಗ್ಡಾನ್‌ ಬೊಬ್ರಾವ್‌ ಐಟಿಎಫ್‌ ದಾವಣಗೆರೆ ಓಪನ್ ಟೆನ್ನಿಸ್‌ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ನಗರದ ಹೈಸ್ಕೂಲ್ ಮೈದಾನದ ಟೆನ್ನಿಸ್ ಅಂಕಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬಾಗ್ಡಾನ್ ಬೊಬ್ರಾವ್‌ ತಮ್ಮ ಎದುರಾಳಿ ಅಮೆರಿಕದ ನಿಕ್ ಚಾಪೆಲ್ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸುವ ಮೂಲಕ ತಮ್ಮ ಟೆನ್ನಿಸ್ ವೃತ್ತಿ ಬದುಕಿನ 6ನೇ ಐಟಿಎಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡು, 2160 ಅಮೆರಿಕನ್‌ ಡಾಲರ್ ನಗದು ಬಹುಮಾನ ತಮ್ಮದಾಗಿಸಿಕೊಂಡರು.
ಅಮೆರಿಕದ ನಿಕ್ ಚಾಪೆಲ್‌ ಪ್ರತಿರೋಧ, ಕಡೆಗೂ ಬಾಗ್ಡಾನ್‌ ಚಾಂಪಿಯನ್‌ ಕನ್ನಡಪ್ರಭ ವಾರ್ತೆ ದಾವಣಗೆರೆ ಅಮೆರಿಕದ ನಿಕ್‌ ಚಾಪೆಲ್ ವಿರುದ್ಧ 6-3, 7-6(7-4) ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಬಾಗ್ಡಾನ್‌ ಬೊಬ್ರಾವ್‌ ಐಟಿಎಫ್‌ ದಾವಣಗೆರೆ ಓಪನ್ ಟೆನ್ನಿಸ್‌ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ನಗರದ ಹೈಸ್ಕೂಲ್ ಮೈದಾನದ ಟೆನ್ನಿಸ್ ಅಂಕಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬಾಗ್ಡಾನ್ ಬೊಬ್ರಾವ್‌ ತಮ್ಮ ಎದುರಾಳಿ ಅಮೆರಿಕದ ನಿಕ್ ಚಾಪೆಲ್ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸುವ ಮೂಲಕ ತಮ್ಮ ಟೆನ್ನಿಸ್ ವೃತ್ತಿ ಬದುಕಿನ 6ನೇ ಐಟಿಎಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡು, 2160 ಅಮೆರಿಕನ್‌ ಡಾಲರ್ ನಗದು ಬಹುಮಾನ ತಮ್ಮದಾಗಿಸಿಕೊಂಡರು. ಭಾರತದ ಅಗ್ರ ಶ್ರೇಯಾಂತಿಕ ರಾಮಕುಮಾರ ರಾಮನಾಥನ್ ವಿರುದ್ಧ ಶನಿವಾರವಷ್ಟೇ ಸೆಮಿಫೈನಲ್‌ನಲ್ಲಿ 6-4, 7-6ರಲ್ಲಿ ಬಾಗ್ಡಾನ್ ಬೊಬ್ರಾವ್‌ ಜಯ ಸಾಧಿಸಿ, ಫೈನಲ್ ತಲುಪಿದ್ದರು. ರಾಮಕುಮಾರ ರಾಮನಾಥನ್ ಧಾರವಾಡದಲ್ಲಿ ಕಳೆದ ವಾರ ಐಟಿಎಫ್ ಟೂರ್‌ ಪ್ರಶಸ್ತಿ ಪಡೆದಿದ್ದರು. ನಿಕ್ ಚಾಪೆಲ್ ಮತ್ತೊಂದು ಸೆಮಿಫೈನಲ್‌ನಲ್ಲಿ ಭಾರತದ ನಿಕಿ ಕಲಿಯಂಡ ಪೂಣಚ್ಚ ವಿರುದ್ಧ 6-3, 6-2ರಲ್ಲಿ ಗೆಲುವು ಸಾಧಿಸಿ, ಫೈನಲ್ ಗೆ ಪ್ರವೇಶ ಪಡೆದಿದ್ದರು. ಪಂದ್ಯಾವಳಿಯಲ್ಲಿ ಡಬಲ್ಸ್ ಜೋಡಿಯಾಗಿದ್ದ ಬಾಗ್ಡಾನ್‌ ಬೊಬ್ರಾವ್‌-ಅಮೆರಿಕಾದ ನಿಕ್ ಚಾಪೆಲ್ ಸಿಂಗಲ್ಸ್ ಫೈನಲ್ ನಲ್ಲಿ ಪ್ರಶಸ್ತಿಗಾಗಿ ತೀವ್ರ ಹಣಾಹಣಿ ನಡೆಸಿದರು. ಆರಂಭದಿಂದಲೂ ಪಾಯಿಂಟ್‌ಗಾಗಿ ಇಬ್ಬರೂ ಸಮಬಲದ ಹೋರಾಟ ನಡೆಸಿ, ಬೆವರು ಹರಿಸಿದ್ದರು. ಅಂತಿಮವಾಗಿ ಬಾಗ್ಡಾನ್‌ ಬೊಬ್ರಾವ್‌ ಮೊದಲ ಸೆಟ್‌ 6-3ರಲ್ಲಿ ಗೆದ್ದರು. ಮೊದಲ ಸೆಟ್‌ ನಿರಾಯಾಸವಾಗಿ ಗೆದ್ದ ಬಾಗ್ಡಾನ್‌ಗೆ ಎರಡನೇ ಸೆಟ್‌ನಲ್ಲಿ ನಿಕ್ ಚಾಪೆಲ್‌ ತೀವ್ರ ಪ್ರತಿರೋಧವೊಡ್ಡಿದರು. 2ನೇ ಸೆಟ್‌ನಲ್ಲಿ ನಿಕ್‌ ಚಾಪೆಲ್ ನಿರೀಕ್ಷೆಗೂ ಮೀರಿದ ಹೋರಾಟ ನೀಡಿ, ಗಮನ ಸೆಳೆದರು. ಇಬ್ಬರು ಸಮಬಲರ ಹೋರಾಟ ಟೈಬ್ರೇಕರ್‌ವರೆಗೂ ಸಾಗಿತು. ಕಡೆಗೆ ಬೊಬ್ರಾವ್ ತಮ್ಮೆಲ್ಲಾ ಅನುಭವ, ಚಾಕಚಕ್ಯತೆ ಪಣಕ್ಕಿಟ್ಟು, 7-6(7-4)ರಲ್ಲಿ ಅಂತರದಲ್ಲಿ ಗೆದ್ದು, ಪ್ರಶಸ್ತಿ ಮುಡಿಗೇರಿಸಿ ಕೊಂಡರು. ಇಬ್ಬರ ಮಧ್ಯೆ ಪೈಪೋಟಿ 1.38 ಗಂಟೆಗಳ ಕಾಲ ನಡೆದ ಫೈನಲ್ ಪಂದ್ಯವನ್ನು ದಾವಣಗೆರೆ ಟೆನಿಸ್ ಅಭಿಮಾನಿಗಳು ತುದಿಗಾಲಲ್ಲಿ ಕುಳಿತು, ಆಟದ ಸವಿಯುಂಡರು. ಸೆಮಿ ಫೈನಲ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದ ನಿಕ್ ಚಾಪೆಲ್‌ ಅಂತಿಮ ಪಂದ್ಯದಲ್ಲಿ ಮೂರು ಸಲ ಡಬಲ್ ಫಾಲ್ಟ್ ಮಾಡಿದರೆ, ಬಾಗ್ಡಾನ್ ಬೊಬ್ರಾವ್‌ ಒಂದೂ ಫಾ ಲ್ಟ್‌ ಮಾಡದೇ, ಜಾಣ್ಮೆ ಮತ್ತು ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಎದುರಾಳಿಯ ತಪ್ಪುಗಳನ್ನು ತಮ್ಮ ಗೆಲುವಿನ ಹಾದಿ ಮಾಡಿಕೊಂಡ ಬಾಗ್ಡಾನ್ ಬೊಬ್ರಾವ್‌ ಐದು ಏಸ್‌ ಸಿಡಿಸಿದರು. ನಿಕ್ ಚಾಪೆಲ್‌ 3 ಏಸ್‌ ಸಿಡಿಸುವಲ್ಲಿ ಸಫಲರಾದರು. ಬಾಗ್ಡಾನ್ ಬೊಬ್ರಾವ್‌ ಸ್ಲೈಸ್‌ ಮೂಲಕ ನಿಕ್‌ ಚಾಪೆಲ್‌ ಏಕಾಗ್ರತೆ ಸಾಧಿಸಿದಂತೆ ಕಾಡಿದರು. ಈ ಇಬ್ಬರೂ ವಿದೇಶೀ ಆಟಗಾರರ ಬೇಸ್‌ ಲೈನ್‌ಗಿಂತಲೂ ನೆಟ್‌ ಬಳಿಯೇ ಚುರುಕಿನ ಆಟ ಪ್ರದರ್ಶಿಸಿದರು. ವಿದೇಶೀ ಆಟಗಾರ ಬಾಗ್ಡಾನ್ ಬೊಬ್ರಾವ್‌ 2019ನೇ ಸಾಲಿನಲ್ಲಿ 2 ಸಲ, 2020, 2021, 2022ರಲ್ಲಿ ತಲಾ ಒಂದು ಬಾರಿ ಐಟಿಎಪ್‌ ಪ್ರಶಸ್ತಿ ಗೆದ್ದಿದ್ದಾರೆ. ಮತ್ತೊಬ್ಬ ಫೈನಲ್ ಪಂದ್ಯದ ಆಟಗಾರ ನಿಕ್ ಚಾಪೆಲ್‌ 2018, 2019ರಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ನಡೆದ ಸಮಾರಂಭದಲ್ಲಿ ಸಂಘಟಕರು, ಸ್ಥಳೀಯ ಆಯೋಜಕರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ, ಶುಭಾರೈಸಿದರು.