ಸಾರಾಂಶ
ಮುಂಬರುವ ಒಲಿಂಪಿಕ್ಸ್ ಏಷ್ಯಾ ಅರ್ಹತಾ ಟೂರ್ನಿಗೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಆಯ್ಕೆ ಟ್ರಯಲ್ಸ್ ಘೋಷಿಸಿದೆ. ಆದರೆ ಕಳೆದೊಂದು ವರ್ಷದಿಂದ ಡಬ್ಲ್ಯುಎಫ್‌ಐ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಜರಂಗ್, ವಿನೇಶ್, ಸಾಕ್ಷಿ ಟ್ರಯಲ್ಸ್‌ಗೆ ತಕರಾರು ತೆಗೆದಿದ್ದಾರೆ. ಹೀಗಾಗಿ ಕುಸ್ತಿ ಸಂಸ್ಥೆ ಹಾಗೂ ಕುಸ್ತಿಪಟುಗಳ ನಡುವಿನ ಹಗ್ಗಜಗ್ಗಾಟ ಮತ್ತೆ ಶುರುವಾದಂತಾಗಿದೆ.
ನವದೆಹಲಿ: ಮುಂಬರುವ ಒಲಿಂಪಿಕ್ಸ್ ಏಷ್ಯಾ ಅರ್ಹತಾ ಸುತ್ತಿಗೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಆಯ್ಕೆ ಟ್ರಯಲ್ಸ್ ಘೋಷಿಸಿದ್ದು, ಇದರಲ್ಲಿ ಗೆಲ್ಲುವ ಕುಸ್ತಿಪಟುಗಳನ್ನು ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ ಮಾಡುವುದಾಗಿ ಫೆಡರೇಶನ್ ತಿಳಿಸಿದೆ.
ಇದೇ ವೇಳೆ ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್‌ಐ ಆಯೋಜಿಸುವ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿರುವ ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಹಾಗೂ ಸಾಕ್ಷಿ ಮಲಿಕ್, ಟ್ರಯಲ್ಸ್‌ಗೆ ತಡೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಏಪ್ರಿಲ್‌ನಲ್ಲಿ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಒಲಿಂಪಿಕ್ಸ್ ಏಷ್ಯಾ ಅರ್ಹತಾ ಸುತ್ತು ನಡೆಯಲಿದ್ದು, ಇದಕ್ಕಾಗಿ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಡಬ್ಲ್ಯುಎಫ್‌ಐ ಕುಸ್ತಿಪಟುಗಳಿಗೆ ಸೂಚಿಸಿದೆ.ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಬಜರಂಗ್, ವಿನೇಶ್‌ಗೂ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದೆ. ಆದರೆ ಕೇಂದ್ರ ಸರ್ಕಾರದಿಂದ ಅಮಾನತುಗೊಂಡಿರುವ ಫೆಡರೇಶನ್ ನಡೆಸುವ ಟ್ರಯಲ್ಸ್‌ನಲ್ಲಿ ಭಾಗವಹಿಸಲ್ಲ, ಭಾರತೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ನೇಮಿತ ಆಡಳಿತ ಸಮಿತಿಯೇ ಟ್ರಯಲ್ಸ್ ಆಯೋಜಿಸಬೇಕು ಎಂದು ಬಜರಂಗ್, ವಿನೇಶ್, ಸಾಕ್ಷಿ ಪಟ್ಟು ಹಿಡಿದು ಕೋರ್ಟ್ ಮೊರೆ ಹೋಗಿದ್ದಾರೆ. ದೆಹಲಿ ಹೈಕೋರ್ಟ್‌ನಲ್ಲಿ ಶುಕ್ರವಾರ ಕುಸ್ತಿಪಟುಗಳ ಅರ್ಜಿ ವಿಚಾರಣೆ ನಡೆಯಲಿದೆ.
ವಿಶ್ವ ಕುಸ್ತಿ ಒಕ್ಕೂಟದ ನಿಯಮದ ಪ್ರಕಾರ ಚುನಾಯಿತ ಸಂಸ್ಥೆಯೇ ಆಯ್ಕೆ ಟ್ರಯಲ್ಸ್ ಆಯೋಜಿಸಬೇಕು. ಒಂದು ವೇಳೆ ಐಒಸಿ ನೇಮಿತ ಆಡಳಿತ ಸಮಿತಿ ಟ್ರಯಲ್ಸ್ ನಡೆಸಿದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ.