ಸಾರಾಂಶ
ಇಬ್ಬರಿಂದಾಗಿ ಹೋರಾಟಕ್ಕೆ ಕೆಟ್ಟ ಹೆಸರು ಬಂತು ಎಂದ ಸಾಕ್ಷಿ ಮಲಿಕ್. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿರುವ ಭಜರಂಗ್ ಪೂನಿಯಾ ಹಾಗೂ ವಿನೇಶ್.
ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಅತ್ಯಾಚಾರ, ಬೆದರಿಕೆ ಸೇರಿ ಗಂಭೀರ ಆರೋಪಗಳನ್ನು ಹೊರಿಸಿ ತೀವ್ರ ಹೋರಾಟ ನಡೆಸಿದ್ದ ದೇಶದ ಅಗ್ರ ಕುಸ್ತಿಪಟುಗಳ ನಡುವೆ ಈಗ ಒಡಕು ಮೂಡಿದೆ.
ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಭಜರಂಗ್ ಪೂನಿಯಾ, ವಿನೇಶ್ ಫೋಗಟ್ ವಿರುದ್ಧ ಮತ್ತೋರ್ವ ಕುಸ್ತಿಪಟು ಸಾಕ್ಷಿ ಮಲಿಕ್ ಆಕ್ರೋಶ ಹೊರಹಾಕಿದ್ದು, ‘ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ವಿನಾಯಿತಿ ಪಡೆಯುವ ಬಜರಂಗ್, ವಿನೇಶ್ ನಿರ್ಧಾರದಿಂದ ನಮ್ಮ ಹೋರಾಟಕ್ಕೆ ಕೆಟ್ಟ ಹೆಸರು ಬಂತು’ ಎಂದಿದ್ದಾರೆ.
ತಮ್ಮ ಪುಸ್ತಕ ‘ವಿಟ್ನಿಸ್’ನಲ್ಲಿ ಈ ಬಗ್ಗೆ ಬರೆದಿರುವ ಸಾಕ್ಷಿ, ‘ಸ್ವಾರ್ಥದಿಂದ ಆಲೋಚಿಸುವ ಹಳೆ ಪದ್ಧತಿ ಮತ್ತೆ ಕಾಣಿಸಿಕೊಂಡಿತು. ಬಜರಂಗ್, ವಿನೇಶ್‌ಗೆ ಅವರ ಆಪ್ತರೇ ದುರಾಸೆ ತುಂಬಿದರು.
ಅವರ ಟ್ರಯಲ್ಸ್ ವಿನಾಯಿತಿ ನಮ್ಮ ಹೋರಾಟದ ಮೇಲೆ ಪರಿಣಾಮ ಬೀರಿತು. ಹೋರಾಟ ಸ್ವಾರ್ಥಕ್ಕಾಗಿ ನಡೆಯುತ್ತಿದೆ ಎಂದು ಪ್ರತಿಭಟನೆ ಬೆಂಬಲಿಸುತ್ತಿದ್ದವರೂ ಅಂದುಕೊಂಡರು’ ಎಂದು ಸಾಕ್ಷಿ ಬೇಸರ ವ್ಯಕ್ತಪಡಿಸಿದ್ದಾರೆ.ಹೋರಾಟದ ಮಧ್ಯೆ ಸಾಕ್ಷಿ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರೆ, ಬಜರಂಗ್ ಹಾಗೂ ವಿನೇಶ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ವಿನೇಶ್ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.