ಸಾರಾಂಶ
ಬೆಂಗಳೂರು: ಚೊಚ್ಚಲ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಕೋಲ್ಕತಾದ ಮಿತ್ರಭಾ ಗುಹಾ ಪ್ರಶಸ್ತಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಕೊನೆಗೊಂಡ ಟೂರ್ನಿಯಲ್ಲಿ ಮಿತ್ರಭಾ ಹಾಗೂ ತಮಿಳುನಾಡಿದ ಎಸ್.ಪಿ.ಸೇತುರಾಮನ್ ನಡುವಿನ ಅಂತಿಮ ಪಂದ್ಯ ಟೈ ಆಯಿತು. ಟೈ ಬ್ರೇಕರ್‌ನಲ್ಲಿ ಗೆದ್ದ ಮಿತ್ರಭಾ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇನ್ನು 3ನೇ ಸ್ಥಾನದಲ್ಲಿ ಕರ್ನಾಟಕದ ಗ್ರ್ಯಾಂಡ್‌ಮಾಸ್ಟರ್ ಪ್ರಣವ್ ಆನಂದ್ ಸೇರಿ 8 ಮಂದಿ ನಡುವೆ ಟೈ ಸಾಧಿಸಿದ್ದರು. ಟೈ ಬ್ರೇಕರ್ ಮೂಲಕ ಇಂಗ್ಲೆಂಡ್‌ನ ನೈಜೆಲ್ ಶಾರ್ಟ್ 3ನೇ ಸ್ಥಾನಿಯಾದರು.ಟೂರ್ನಿಯಲ್ಲಿ ನೀಲಾಶ್ ಸಾಹಾ ಗ್ರ್ಯಾಂಡ್ ಮಾಸ್ಟರ್, ಪುಷ್ಕರ್ ಡೆರೆ, ನಿತಿನ್ ಬಾಬು, ಡೇವಿಕ್ ವಾಧವನ್, ಸಾತ್ವಿಕ್ ಅಡಿಗ ಇಂಟರ್ನ್ಯಾಷನಲ್ ಮಾಸ್ಟರ್ ಹಾಗೂ ಲಾಸ್ಯ ವುಮನ್ ಇಂಟರ್ನ್ಯಾಷನಲ್ ಮಾಸ್ಟರ್ ಆಗಿ ಹೊರಹೊಮ್ಮಿದರು.ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಟೂರ್ನಿ ಚೆಸ್ ಮೇಲಿನ ಕರ್ನಾಟಕದ ಬದ್ಧತೆಗೆ ಉದಾಹರಣೆ. ಉದಯೋನ್ಮುಖ ಪ್ರತಿಭೆಗಳಿಗೆ ಮಿಂಚಲು ವೇದಿಕೆಯನ್ನು ಒದಗಿಸಿದ ಬೆಂಗಳೂರು ಜಿಲ್ಲಾ ಚೆಸ್ ಸಂಸ್ಥೆಯ(ಬಿಯುಡಿಸಿಎ) ಕಾರ್ಯ ಶ್ಲಾಘನೀಯ ಎಂದರು. ಬಿಯುಡಿಸಿಎ ಅಧ್ಯಕ್ಷೆ ಸೌಮ್ಯಾ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.