ಒದ್ದರೆ ಬೀಳುವಂತಿದೆ ಬೆಂಗಳೂರಿನ ಫುಟ್‌ಬಾಲ್‌ ಸ್ಟೇಡಿಯಂ: ಭೂತದ ಬಂಗಲೆಯಂತೆ ಕಾಣುವ ಮೈದಾನ

| Published : Aug 19 2024, 12:51 AM IST / Updated: Aug 19 2024, 04:18 AM IST

ಸಾರಾಂಶ

ಕ್ರೀಡಾಂಗಣದ ಕಟ್ಟಡವೇ ಶಿಥಿಲ. ಇಂದೋ, ನಾಳೆಯೋ ಬೀಳುವಂತಹ ಸ್ಥಿತಿ. ಗಾಂಜಾ ಅಡ್ಡೆಯಾಗಿದೆ ಕ್ರೀಡಾಂಗಣ. ಎಲ್ಲಿ ನೋಡಿದರೂ ಕಸ, ದುರ್ವಾಸನೆ. ಗಿಡಗಳು ತುಂಬಿ ಪಾಳು ಬಿದ್ದಂತಿರುವ ಕ್ರೀಡಾಂಗಣ.

 ಬೆಂಗಳೂರು : ಒಂದು ಸುಂದರ ಕ್ರೀಡಾಂಗಣವನ್ನು ಪಾಳುಬಿದ್ದ ಭೂತಬಂಗಲೆ ರೀತಿ ಮಾಡುವುದು ಹೇಗೆ ಎಂದು ನಿಮಗೆ ತಿಳಿಯಬೇಕಿದ್ದರೆ ನೀವೊಮ್ಮೆ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ)ಯ ಬೆಂಗಳೂರಿನಲ್ಲಿರುವ ಕ್ರೀಡಾಂಗಣಕ್ಕೆ ಹೋಗಬೇಕು. 

ಆಟ ನೋಡಿ, ಸಂಭ್ರಮಪಟ್ಟು ಹಿಂದಿರುಗುವ ಬದಲು ಕ್ರೀಡಾಂಗಣದ ಸ್ಥಿತಿಗತಿ ನೋಡಿ ನೀವು ಮರುಕ ಪಡದಿದ್ದರೆ ಫುಟ್ಬಾಲ್‌ ಮೇಲಾಣೆ! ಕ್ರೀಡಾಂಗಣದಲ್ಲಿ ಕಸ ಇದೆಯೋ ಅಥವಾ ಕಸದ ರಾಶಿಯೊಳಗೆ ಕ್ರೀಡಾಂಗಣ ಇದೆಯೋ ಎಂದು ಆಶ್ಚರ್ಯವೂ ಆಗಬಹುದು. ಇನ್ನೂ ಹೇಳಬೇಕೆಂದರೆ, ಪಂದ್ಯ ವೀಕ್ಷಣೆಗಾಗಿ ಕ್ರೀಡಾಂಗಣಕ್ಕೆ ಹೋದ ನೀವು, ಸುರಕ್ಷಿತವಾಗಿ ನಿಮ್ಮ ಮನೆಗೆ ವಾಪಸ್‌ ಹೋದರೆ, ಅದು ನಿಮ್ಮ ಪುಣ್ಯ ಎಂದೇ ಭಾವಿಸಬಹುದು.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಫುಟ್ಬಾಲ್‌ ಕ್ರೀಡಾಂಗಣದ ಸ್ಥಿತಿಗತಿ ಅಷ್ಟರ ಮಟ್ಟಿಗೆ ಶೋಚನೀಯ. 5 ದಶಕದ ಇತಿಹಾಸವಿರುವ ಕ್ರೀಡಾಂಗಣದಲ್ಲಿ ನಿರಂತರವಾಗಿ ಫುಟ್ಬಾಲ್‌ ಪಂದ್ಯಗಳು ನಡೆಯುತ್ತಲೇ ಇರುತ್ತವೆ. ಪ್ರಾಥಮಿಕ ಶಾಲೆಗೆ ಹೋಗುತ್ತಿರುವ ಸಣ್ಣ ಮಕ್ಕಳಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗಿನ ಪಂದ್ಯಗಳು ಇಲ್ಲಿ ನಡೆಯುತ್ತಿರುತ್ತವೆ. ಆದರೆ ಕ್ರೀಡಾಂಗಣದ ಮೇಲ್ಚಾವಣಿ, ಪ್ರೇಕ್ಷಕರ ಗ್ಯಾಲರಿ, ಶೌಚಾಲಯ, ಡ್ರೆಸ್ಸಿಂಗ್‌ ಕೋಣೆ, ಗೇಟ್‌, ಪಾರ್ಕಿಂಗ್‌, ಡಗೌಟ್‌, ವಿಶ್ರಾಂತಿ ಕೊಠಡಿ...ಹೀಗೆ ಯಾವುದೂ ಸರಿಯಿಲ್ಲ. 

ಗಬ್ಬು ನಾರುವ ಕಸ ಸ್ವಾಗತಿಸುತ್ತೆ!

ನೀವೊಬ್ಬ ಫುಟ್ಬಾಲ್‌ ಅಭಿಮಾನಿಯಾಗಿದ್ದು, ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಹೋಗುತ್ತೀರಿ ಎಂದಿಟ್ಟುಕೊಳ್ಳಿ. ನಿಮಗೆ ಆಗುವ ಅನುಭವ ಹೇಗಿರುತ್ತದೆ ಎನ್ನುವುದನ್ನು ನಾವೇ ಹೇಳುತ್ತೇವೆ. ಪ್ರತಿಷ್ಠಿತ ಮಾಲ್‌ ಪಕ್ಕದಲ್ಲಿರುವ ರಸ್ತೆ ಮೂಲಕ ಕ್ರೀಡಾಂಗಣಕ್ಕೆ ಪ್ರವೇಶಿಸಲು 8 ಗೇಟ್‌ಗಳಿವೆ. ಯಾವುದೇ ಗೇಟ್‌ ಮೂಲಕ ಒಳಗೆ ಹೋದರೂ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳು, ರಾಶಿ ಹಾಕಿರುವ ಕಸ, ಒಣಗಲು ಹಾಕಿರುವ ಬಟ್ಟೆಗಳು, ಗಬ್ಬು ನಾರುವ ವಾಸನೆ ನಿಮ್ಮ ಮೂಗಿಗೆ ಬಡಿಯುತ್ತದೆ.

ಇದನ್ನೇ ನೀವು ನಿಮಗೆ ಸಿಗುತ್ತಿರುವ ಅದ್ಧೂರಿ ಸ್ವಾಗತ ಎಂದು ಭಾವಿಸಬಹುದು. ಶೌಚಾಲಯ ಎಲ್ಲಿದೆ ಎಂದು ಬೋರ್ಡ್‌ ಹುಡುಕಬೇಕಾಗಿಲ್ಲ. ಯಾರನ್ನೂ ಕೇಳಬೇಕಾಗಿಲ್ಲ. ಅಲ್ಲಿನ ದುರ್ವಾಸನೆಯೇ ನಿಮ್ಮನ್ನು ಗೂಗಲ್‌ ಮ್ಯಾಪ್ಸ್‌ಗಿಂತ ನಿಖರವಾಗಿ ನೇರ ಶೌಚಾಲಯಕ್ಕೆ ಸಾಗಿಸುತ್ತದೆ. 

ಪ್ರೇಕ್ಷಕರ ಗ್ಯಾಲರಿ ಪ್ರವೇಶಿಸುತ್ತಿದ್ದಂತೆಯೇ ಸಿಮೆಂಟ್‌ ಕಿತ್ತು ಬಂದಿರುವ ನೆಲಹಾಸು, ಬಿರುಕು ಬಿಟ್ಟ ಗೋಡೆ, ಮುರಿದು ಹೋದ ಖುರ್ಚಿಗಳು, ಇಂದೋ ನಾಳೆಯೋ ಬೀಳುವಂತೆ ಭಯ ಹುಟ್ಟಿಸುವ ಮೇಲ್ಛಾವಣಿ ನೋಡಿ ನಿಮ್ಮ ಎದೆ ಝಲ್‌ ಎನ್ನಬಹುದು ಜೋಪಾನ!

ಇಷ್ಟು ಸಾಲದು ಎಂಬಂತೆ ಗೇಟ್‌ ಪಕ್ಕದಲ್ಲೇ ಬಿದ್ದಿರುವ ಬಿಯರ್‌ ಬಾಟಲಿಗಳು, ಗೋಡೆಯ ಮೇಲಿನ ಗುಟ್ಕಾ ಕಲೆಗಳು, ಕಿಟಕಿ ಮೇಲಿನ ಹಕ್ಕಿಗಳ ಹಿಕ್ಕೆ, ಕೊಳಚೆ ನೀರು, ಸೋರುತ್ತಿರುವ ಮೇಲ್ಛಾವಣಿಯ ದರ್ಶನ ಕೂಡಾ ಮಾಡಬಹುದು. ಕ್ರೀಡಾಂಗಣದ ಸುತ್ತಲೂ ಹುಲ್ಲು, ಮರಗಳು ಬೃಹತ್‌ ಎತ್ತರಕ್ಕೆ ಬೆಳೆದು ನಿಂತಿವೆ. ಹಾವು, ಚೇಳುಗಳೂ ಇರುವ ಸಾಧ್ಯತೆ ಹೆಚ್ಚಿದ್ದು, ದನ ಕರುಗಳು ಕೂಡಾ ತಮ್ಮ ವಾಸಸ್ಥಳವನ್ನು ಕ್ರೀಡಾಂಗಣಕ್ಕೆ ಶಿಫ್ಟ್‌ ಮಾಡಿಕೊಂಡಿವೆ. 

ಪಂದ್ಯದ ವೇಳೆಯೇ ಕುಸಿದು ಬಿದ್ದಿತ್ತು ಕ್ರೀಡಾಂಗಣ ಸ್ಟ್ಯಾಂಡ್‌

ಕಳೆದ ತಿಂಗಳು ಇದೇ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಕಪ್‌ ಫುಟ್ಬಾಲ್‌ ಟೂರ್ನಿಯ ಫೈನಲ್‌ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯ ಒಂದು ಭಾಗ ಕುಸಿದು ಬಿದ್ದಿತ್ತು. ಸ್ಟ್ಯಾಂಡ್‌ ಮೇಲಿದ್ದ ಪ್ರೇಕ್ಷಕರು ಕೆಳಕೆ ಬಿದ್ದಿದ್ದರು. 10 ಮಂದಿಗೆ ಗಾಯವೂ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್‌ ಆಗಿತ್ತು. ಆದರೆ, ಘಟನೆ ನಡೆದು ಒಂದು ತಿಂಗಳಾದರೂ ಕೆಎಸ್‌ಎಫ್‌ಎ ಸ್ಟ್ಯಾಂಡ್‌ ಸರಿಪಡಿಸುವ ಗೋಜಿಗೆ ಹೋಗಿಲ್ಲ. ನೆಲಕ್ಕೆ ಬಿದ್ದಿದ್ದ ಸಿಮೆಂಟ್‌, ಇಟ್ಟಿಗೆಗಳು ಈಗಲೂ ಅಲ್ಲೇ ಇವೆ.

ನಮ್ಗೆ ಗೊತ್ತಿಲ್ಲ, ಅಧ್ಯಕ್ಷರನ್ನು ಕೇಳಿ: ಕೆಎಸ್‌ಎಫ್‌ಎ ಪದಾಧಿಕಾರಿಗಳು!

ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಕೆಎಸ್‌ಎಫ್‌ಎ ಕಾರ್ಯದರ್ಶಿ ಎಂ. ಕುಮಾರ್‌ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ಅವರಿಂದ ಸರಿಯಾದ ಮಾಹಿತಿ ಸಿಗಲಿಲ್ಲ. ‘ಕ್ರೀಡಾಂಗಣದ ಅವ್ಯವಸ್ಥೆ, ರಿಪೇರಿ ಬಗ್ಗೆ ನಮಗೇನೂ ಗೊತ್ತಿಲ್ಲ. ಅದನ್ನು ನೀವು ಅಧ್ಯಕ್ಷರನ್ನೇ ಕೇಳಬೇಕು. ಅವರೇ ಈ ಬಗ್ಗೆ ಉತ್ತರಿಸುತ್ತಾರೆ. ನಮಗೆ ಏನು ಮಾತಾಡಬೇಕು, ಯಾವುದನ್ನು ಹೇಳಬಾರದು ಎಂಬ ಶಿಷ್ಟಾಚಾರವಿದೆ’ ಎಂದಷ್ಟೇ ಹೇಳಿದರು. 

ಇಲ್ಲೇ ಗಾಂಜಾ ಸೇವಿಸ್ತಾರೆ, ಕೇಳಿದ್ರೆ ಚೂರಿ ತೋರಿಸ್ತಾರೆ: ಕಾರ್ಯದರ್ಶಿ ಅಸಹಾಯಕತೆ!

ಹೀಗೆ ಹೇಳಿದ್ದು ಯಾವುದೋ ಆಟಗಾರನೋ, ಪಂದ್ಯ ವೀಕ್ಷಣೆಗೆ ಬಂದ ಪ್ರೇಕ್ಷಕನೋ ಅಲ್ಲ. ಸ್ವತಃ ಕೆಎಸ್‌ಎಫ್‌ಎ ಕಾರ್ಯದರ್ಶಿ ಎಂ.ಕುಮಾರ್‌. ಕ್ರೀಡಾಂಗಣದ ಒಂದು ಕಡೆಯಲ್ಲಿರುವ ಪ್ರೇಕ್ಷಕರ ಗ್ಯಾಲರಿ ತುಂಬಾ ಸಮಯದಿಂದ ಖಾಲಿ ಬಿದ್ದಿದೆ. ಯಾವುದೇ ಪಂದ್ಯವಿದ್ದರೂ ಅಲ್ಲಿಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ. ಈ ಬಗ್ಗೆ ಕುಮಾರ್‌ ಅವರಲ್ಲಿ ಪ್ರಶ್ನಿಸಿದಾಗ, ಅಸಹಾಯಕತೆ ತೋರಿದರು. ‘ಗ್ಯಾಲರಿಗೆ ಏನೂ ಸಮಸ್ಯೆಯಾಗಿಲ್ಲ. ಆದರೆ ಅದು ಗಾಂಜಾ ಅಡ್ಡೆಯಾಗಿದೆ. ಗಾಂಜಾ ಸೇವಿಸಲು ತುಂಬಾ ಜನ ಬರುತ್ತಾರೆ. ಪ್ರಶ್ನಿಸಿದರೆ ನಮಗೇ ಚೂರಿ ತೋರಿಸುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಕೇಳಿದರೆ ನಿಮಗೆ ಗೊತ್ತಾಗುತ್ತದೆ’ ಎಂದು ಅಳಲು ತೋಡಿಕೊಂಡರು. 

ನವೀಕರಣಕ್ಕೆ ಹಣವಿಲ್ಲ: ಕೆಎಸ್‌ಎಫ್‌ಎ

ಕ್ರೀಡಾಂಗಣ 1971ರಲ್ಲಿ ನಿರ್ಮಾಣಗೊಂಡಿದ್ದರೂ, ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಶತಮಾನದಲ್ಲಿ ಮುಗಿಯುವಂತೆ ಕಾಣುತ್ತಲೂ ಇಲ್ಲ. ಸ್ಟೇಡಿಯಂನ ಗ್ಯಾಲರಿಯ ಸುತ್ತಲೂ ಕೆಲವು ಕಡೆಗಳಲ್ಲಿ ಕೆಲಸ ಅರ್ಧಕ್ಕೇ ನಿಂತ ಕುರುಹುಗಳಿವೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟು ಅಪಾಯವನ್ನು ಆಹ್ವಾನಿಸುತ್ತಿದೆ. ಆದರೆ ಕ್ರೀಡಾಂಗಣದ ನವೀಕರಣಕ್ಕೆ ಬೇಕಾದ ಹಣ ಇಲ್ಲ ಎಂದು ಕೆಎಸ್‌ಎಫ್‌ಎ ತಿಳಿಸಿದೆ. ಸರ್ಕಾರವೇ ನವೀಕರಣಕ್ಕೆ ಮುಂದಾಗಬೇಕು ಎಂದು ಅಲವತ್ತುಕೊಂಡಿದೆ.

ಇದು ಗಾಂಜಾ ಅಡ್ಡೆ!

ಸ್ಟೇಡಿಯಂನ ಗ್ಯಾಲರಿ ಗಾಂಜಾ ಅಡ್ಡೆಯಾಗಿದೆ. ಗಾಂಜಾ ಸೇವಿಸಲು ತುಂಬಾ ಜನ ಬರುತ್ತಾರೆ. ಪ್ರಶ್ನಿಸಿದರೆ ನಮಗೇ ಚೂರಿ ತೋರಿಸುತ್ತಾರೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಕೇಳಿ ನೋಡಿ, ನಿಮಗೇ ಗೊತ್ತಾಗುತ್ತದೆ.

- ಎಂ. ಕುಮಾರ್‌, ರಾಜ್ಯ ಫುಟ್‌ಬಾಲ್‌ ಸಂಸ್ಥೆ ಕಾರ್ಯದರ್ಶಿ