ಸಾರಾಂಶ
ಬೆಂಗಳೂರು : ಕರ್ನಾಟಕ ತಂಡದ ತಾರಾ ಬ್ಯಾಟರ್ ಆರ್.ಸರ್ಮಥ್ ಮುಂಬರುವ 2024-25ರ ದೇಸಿ ಋತುವಿನಲ್ಲಿ ಉತ್ತರಾಖಂಡ ತಂಡದ ಪರ ಆಡಲು ನಿರ್ಧರಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ರಾಜ್ಯದ ಹಲವು ಆಟಗಾರರು ಬೇರೆ ಬೇರೆ ತಂಡಗಳಿಗೆ ವಲಸೆ ಹೋಗಿದ್ದು ಈ ಸಾಲಿಗೆ ಈಗ ಸಮರ್ಥ್ ಕೂಡ ಸೇರ್ಪಡೆಗೊಂಡಿದ್ದಾರೆ.
2013ರಲ್ಲಿ ಕರ್ನಾಟಕ ತಂಡಕ್ಕೆ ಪಾದಾಪರ್ಣೆ ಮಾಡಿದ್ದ ಸಮರ್ಥ್, ಎಲ್ಲಾ ಮೂರೂ ಮಾದರಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿರುವ ಸಮರ್ಥ್, ಈ ವರೆಗೂ 88 ಪ್ರಥಮ ದರ್ಜೆ, 64 ಲಿಸ್ಟ್ ‘ಎ’ ಹಾಗೂ 23 ಟಿ20 ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಆಕರ್ಷಕ ಬ್ಯಾಟಿಂಗ್ ಮೂಲಕ ಹಲವು ಬಾರಿ ಭಾರತ ‘ಎ’ ತಂಡಕ್ಕೂ ಆಯ್ಕೆಯಾಗಿದ್ದ ಸಮರ್ಥ್, ಕಳೆದ ಸಾಲಿನ ರಣಜಿ ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 26.23ರ ಸರಾಸರಿಯಲ್ಲಿ 341 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು.
ಭಾರತ ವನಿತಾ ತಂಡಕ್ಕೆ 17ರ ಶಬ್ನಂ ಸೇರ್ಪಡೆ
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಸದ್ಯ ನಡೆಯುತ್ತಿರುವ ಕ್ರಿಕೆಟ್ ಸರಣಿಗೆ ಭಾರತ ಮಹಿಳಾ ತಂಡಕ್ಕೆ 17 ವರ್ಷದ ಶಬ್ನಂ ಶಕೀಲ್ ಸೇರ್ಪಡೆಗೊಂಡಿದ್ದಾರೆ. ಮುಂಬೈನ ಮಧ್ಯಮ ವೇಗಿ ಶಬ್ನಂ ಇದೇ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು 3ನೇ ಏಕದಿನ ಪಂದ್ಯಕ್ಕೂ ಮುನ್ನ ತಂಡ ಸೇರ್ಪಡೆಗೊಳ್ಳಲಿದ್ದು, ಏಕೈಕ ಟೆಸ್ಟ್ ಹಾಗೂ 3 ಪಂದ್ಯಗಳ ಟಿ20 ಸರಣಿಯಲ್ಲೂ ತಂಡದ ಆಯ್ಕೆಗೆ ಲಭ್ಯವಿರಲಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 3ನೇ ಏಕದಿನ ಜೂ.23ಕ್ಕೆ ನಡೆಯಲಿದ್ದು, ಜೂ.28ರಿಂದ ಟೆಸ್ಟ್, ಜು.5, 7 ಹಾಗೂ 9ಕ್ಕೆ 3 ಟಿ20 ಪಂದ್ಯಗಳು ನಿಗದಿಯಾಗಿದೆ.