ಗಂಭೀರ್‌ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ, ದೇಸಿ ತಂಡಕ್ಕೆ ಕೋಚ್‌ ಅಗಿಲ್ಲ. 2022, 2023ರಲ್ಲಿ ಲಖನೌ ಮೆಂಟರ್‌ ಆಗಿದ್ದ ಅವರು, ಈ ಬಾರಿ ಕೆಕೆಆರ್‌ ಮೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್‌ ಆಗಲು ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರನ್ನು ಬಿಸಿಸಿಐ ಸಂಪರ್ಕಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರೊಂದಿಗೆ ಈಗಾಗಲೇ ಬಿಸಿಸಿಐ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಐಪಿಎಲ್‌ ಬಳಿಕ ಈ ಬಗ್ಗೆ ಅಂತಿಮ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ. 

2007ರ ಟಿ20 ವಿಶ್ವಕಪ್‌, 2011ರ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ಗಂಭೀರ್‌ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ, ದೇಸಿ ತಂಡಕ್ಕೆ ಕೋಚ್‌ ಅಗಿಲ್ಲ. 2022, 2023ರಲ್ಲಿ ಲಖನೌ ಮೆಂಟರ್‌ ಆಗಿದ್ದ ಅವರು, ಈ ಬಾರಿ ಕೆಕೆಆರ್‌ ಮೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿ20 ವಿಶ್ವಕಪ್‌ ಬಳಿಕ ಬಿಸಿಸಿಐ ಹೊಸ ಕೋಚ್‌ನ ನೇಮಿಸಲಿದ್ದು, ಅರ್ಜಿ ಸಲ್ಲಿಕೆಗೆ ಮೇ 27ರ ಗಡುವು ವಿಧಿಸಿದೆ.

ಭಾರತ-ಬಾಂಗ್ಲಾ ಅಭ್ಯಾಸ ಪಂದ್ಯ ಜೂನ್‌ 1ಕ್ಕೆ ನಿಗದಿ

ದುಬೈ: ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಏಕೈಕ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಜೂ.1ರಂದು ಟೀಂ ಇಂಡಿಯಾ, ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಪಂದ್ಯದ ಸ್ಥಳ, ಸಮಯ ಇನ್ನಷ್ಟೇ ನಿಗದಿಯಾಗಬೇಕಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 20 ತಂಡಗಳ ಪೈಕಿ 17 ತಂಡಗಳು ಮೇ 27ರಿಂದ ಜೂ.1ರ ವರೆಗೆ ಅಭ್ಯಾಸ ಪಂದ್ಯಗಳನ್ನಾಡಲಿವೆ. ಇಂಗ್ಲೆಂಡ್‌, ಪಾಕಿಸ್ತಾನ, ನ್ಯೂಜಿಲೆಂಡ್‌ ತಂಡಗಳು ಯಾವುದೇ ಅಭ್ಯಾಸ ಪಂದ್ಯಗಳನ್ನಾಡುವುದಿಲ್ಲ. ಭಾರತ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಜೂ.5ಕ್ಕೆ ಐರ್ಲೆಂಡ್‌ ವಿರುದ್ಧ ಸೆಣಸಲಿದೆ.