ಐಪಿಎಲ್‌ ವೇಳೆ ಆಟಗಾರರ ಡ್ರೆಸ್ಸಿಂಗ್‌ ರೂಂಗೆ ಕುಟುಂಬಸ್ಥರ ಪ್ರವೇಶವಿಲ್ಲ; ತೋಳಿಲ್ಲದ ಜೆರ್ಸಿಗೂ ನಿಷೇಧ

| Published : Mar 05 2025, 12:30 AM IST

ಸಾರಾಂಶ

ಪಂದ್ಯ ಇರುವ ದಿನದಂದು ಈಗಾಗಲೇ ಕುಟುಂಬಸ್ಥರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಅಭ್ಯಾಸ ಪಂದ್ಯಗಳಿಗೂ ಡ್ರೆಸ್ಸಿಂಗ್ ರೂಂಗೆ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ.

ನವದೆಹಲಿ: ಅಂತಾರಾಷ್ಟ್ರೀಯ ಪ್ರವಾಸ ಸಂದರ್ಭದಲ್ಲಿ ಆಟಗಾರರು ತಮ್ಮ ಕುಟುಂಬಸ್ಥರ ಜೊತೆ ಇರುವಂತಿಲ್ಲ ಎನ್ನುವ ಕಠಿಣ ನಿಯಮ ತಂದಿದ್ದ ಬಿಸಿಸಿಐ ಇದೀಗ ಆ ನಿಯಮಗಳನ್ನು ಐಪಿಎಲ್‌ಗೂ ತರಲು ಮುಂದಾಗಿದೆ. ಐಪಿಎಲ್ ವೇಳೆ ಆಟಗಾರರು ಇವರು ಸ್ಥಳ, ಡ್ರೆಸ್ಸಿಂಗ್ ರೂಮ್‌ಗೆ ಕುಟುಂಬಸ್ಥರು ಬರುವಂತಿಲ್ಲ. ಎಲ್ಲಾ ಆಟಗಾರರು ತಂಡದ ಬಸ್‌ನಲ್ಲೇ ಸಂಚರಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.

ಫೆ.18ರಂದು ನಡೆದ ಸಭೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಫ್ರಾಂಚೈಸಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಿದೆ. ಹೊಸ ನಿಯಮಗಳು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಅನ್ವಯಿಸಲಿದೆ. ಪಂದ್ಯ ಇರುವ ದಿನದಂದು ಈಗಾಗಲೇ ಕುಟುಂಬಸ್ಥರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಅಭ್ಯಾಸ ಪಂದ್ಯಗಳಿಗೂ ಡ್ರೆಸ್ಸಿಂಗ್ ರೂಂಗೆ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ. ಇನ್ನು, ‘ಪಂದ್ಯದ ವೇಳೆ ಆಟಗಾರರು ಕನಿಷ್ಠ 2 ಓವರ್‌ಗಳಿಗಾದರೂ ಕಿತ್ತಳೆ, ನೇರಳೆ ಬಣ್ಣದ ಕ್ಯಾಪ್‌ ಧರಿಸಬೇಕು. ಪಂದ್ಯದ ಬಳಿಕ ಪ್ರೆಸೆಂಟೇಷನ್‌ ವೇಳೆ ಆಟಗಾರರು ತೋಳಿಲ್ಲದ ಜೆರ್ಸಿಗಳನ್ನು ಧರಿಸುವಂತಿಲ್ಲ. ಅಲ್ಲದೇ ಯಾವುದೇ ಜೆರ್ಸಿ ಸಂಖ್ಯೆಗಳ ಬದಲಾವಣೆ ಮಾಡುವುದಿದ್ದರೆ 24 ಗಂಟೆಗೂ ಮುಂಚೆ ತಿಳಿಸಬೇಕು’ ಎಂದಿದೆ.