ಜ.12ಕ್ಕೆ ಬಿಸಿಸಿಐ ಸಭೆ. ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ಜೊತೆ ಮಾತುಕತೆ: ಕೋಚ್‌ ಗಂಭೀರ್‌ ಭವಿಷ್ಯ ನಿರ್ಧಾರ?

| Published : Jan 08 2025, 12:17 AM IST / Updated: Jan 08 2025, 04:08 AM IST

ಜ.12ಕ್ಕೆ ಬಿಸಿಸಿಐ ಸಭೆ. ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ಜೊತೆ ಮಾತುಕತೆ: ಕೋಚ್‌ ಗಂಭೀರ್‌ ಭವಿಷ್ಯ ನಿರ್ಧಾರ?
Share this Article
  • FB
  • TW
  • Linkdin
  • Email

ಸಾರಾಂಶ

ಜ.12ಕ್ಕೆ ನಡೆಯಲಿದೆ ಬಿಸಿಸಿಐ ಸಭೆ. ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ಜೊತೆ ಮಾತುಕತೆ ನಡೆಸಲಿದ್ದಾರೆ ಬಿಸಿಸಿಐ ನೂತನ ಕಾರ್ಯದರ್ಶಿ ದೇವ್‌ಜಿತ್‌ ಸಾಯ್ಕಿಯಾ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಟೆಸ್ಟ್‌ ಭವಿಷ್ಯದ ಬಗ್ಗೆಯೂ ಚರ್ಚೆ ಸಾಧ್ಯತೆ.

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಟೆಸ್ಟ್‌ ಸರಣಿ ಸೋತ ಬೆನ್ನಲ್ಲೇ, ಕೆಲ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಿಸಿಸಿಐ ಮುಂದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜ.12ಕ್ಕೆ ಮುಂಬೈನಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದ್ದು, ಬಿಸಿಸಿಐನ ನೂತನ ಕಾರ್ಯದರ್ಶಿಯಾಗಿ ದೇವ್‌ಜಿತ್‌ ಸಾಯ್ಕಿಯಾ ಹಾಗೂ ಖಜಾಂಚಿಯಾಗಿ ಪ್ರಭ್‌ತೇಜ್‌ ಭಾಟಿಯಾ ಅವಿರೋಧ ಆಯ್ಕೆಯಾಗಲಿದ್ದಾರೆ. ಅದೇ ದಿನ ಭಾರತ ತಂಡದ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ 0-3ರಲ್ಲಿ ವೈಟ್‌ವಾಶ್‌ ಮುಖಭಂಗ ಅನುಭವಿಸಿದಾಗಲೇ ಗೌತಮ್‌ ಗಂಭೀರ್‌ರನ್ನು ಕೇವಲ ಸೀಮಿತ ಓವರ್ ತಂಡಗಳಿಗೆ ಕೋಚ್‌ ಆಗಿ ಉಳಿಸಿ, ಟೆಸ್ಟ್‌ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ಅಥವಾ ಮತ್ತಿನ್ಯಾರಾದರೂ ಹೊಸಬರನ್ನು ನೇಮಿಸುವ ಕುರಿತು ಬಿಸಿಸಿಐ ಚಿಂತನೆ ಶುರು ಮಾಡಿತ್ತು ಎನ್ನಲಾಗಿದೆ. ಇದೀಗ ಬಾರ್ಡರ್‌-ಗವಾಸ್ಕರ್‌ ಟೂರ್ನಿಯಲ್ಲಿ ಎದುರಾದ ಸೋಲು, ಕೋಚ್‌ ಗಂಭೀರ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದಂತೆ ಕಾಣುತ್ತಿದೆ.

ಗಂಭೀರ್‌ರನ್ನು ಟೆಸ್ಟ್‌ ತಂಡದ ಕೋಚ್‌ ಆಗಿ ಮುಂದುವರಿಸಬೇಕೇ ಬೇಡವೆ ಎನ್ನುವ ಬಗ್ಗೆ ಬಿಸಿಸಿಐನ ನೂತನ ಕಾರ್ಯದರ್ಶಿ ದೇವ್‌ಜಿತ್‌ ಅವರು ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಿರಿಯ ಬ್ಯಾಟರ್‌ಗಳ ಬಗ್ಗೆಯೂ ಚರ್ಚೆ

ಭಾರತ ತಂಡ ಇನ್ನು 6 ತಿಂಗಳು ಟೆಸ್ಟ್‌ ಆಡುವುದಿಲ್ಲ. ಜೂನ್‌ನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, 2025-27ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಭಿಯಾನವನ್ನು ಅಲ್ಲೇ ಆರಂಭಿಸಲಿದೆ. 2 ವರ್ಷ ಅವಧಿಯಲ್ಲಿ ನಡೆಯಲಿರುವ ಎಲ್ಲಾ ಸರಣಿಗಳನ್ನು ಆಡುವ ಆಟಗಾರರನ್ನು ಗುರುತಿಸಿ ಆಯ್ಕೆ ಮಾಡಬೇಕಿದೆ. ಹಿರಿಯ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ 2027ರ ವರೆಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ, ಈ ಇಬ್ಬರು ಆಟಗಾರರ ಜೊತೆಯೂ ಅಗರ್ಕರ್‌ ಹಾಗೂ ಕಾರ್ಯದರ್ಶಿ ದೇವ್‌ಜಿತ್‌ ಸಾಯ್ಕಿಯಾ ಮಾತುಕತೆ ನಡೆಸಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತದೆ.