ಸಾರಾಂಶ
ಮುಂಬೈ: ಕಳೆದ 6 ಪಂದ್ಯಗಳಲ್ಲಿ ಗೆಲುವಿನಿಂದ ವಂಚಿತವಾಗಿದ್ದ ಬೆಂಗಾಲ್ ವಾರಿಯರ್ಸ್ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಮಂಗಳವಾರ ತೆಲುಗು ಟೈಟಾನ್ಸ್ ತಂಡವನ್ನು 46-26 ಅಂಕಗಳಿಂದ ಮಣಿಸಿತು.
ಅತ್ತ ಟೈಟಾನ್ಸ್ ಆಡಿದ 11 ಪಂದ್ಯಗಳಲ್ಲಿ 10ನೇ ಸೋಲುಂಡಿದ್ದು, ಪ್ಲೇ-ಆಫ್ ಕನಸನ್ನು ಬಹುತೇಕ ಭಗ್ನಗೊಳಿಸಿದೆ.ರೈಡಿಂಗ್ ಹಾಗೂ ಡಿಫೆಂಡಿಂಗ್‌ನಲ್ಲಿ ಮಿಂಚಿದ ಬೆಂಗಾಲ್, ಟೈಟಾನ್ಸ್ ತಂಡವನ್ನು 3 ಬಾರಿ ಆಲೌಟ್ ಮಾಡಿತು.
ಮೊದಲಾರ್ಧದಲ್ಲೇ 2 ಬಾರಿ ಅಲೌಟ್ ಆದ ಟೈಟಾನ್ಸ್ 17 ಅಂಕಗಳ ಹಿನ್ನಡೆ ಅನುಭವಿಸಿತು. ನಂತರ ಸ್ವಲ್ಪ ಮಟ್ಟಿಗೆ ಕಮ್‌ಬ್ಯಾಕ್ ಮಾಡುವ ಪ್ರಯತ್ನ ಮಾಡಿತಾದರೂ ಪ್ರಯತ್ನ ಫಲ ಕೊಡಲಿಲ್ಲ. ಆರಂಭದಲ್ಲಿ ತೀವ್ರ ವೈಫಲ್ಯ ಅನುಭವಿಸಿದ ಪವನ್ ಶೆರಾವತ್ ದ್ವಿತೀಯಾರ್ಧದಲ್ಲಿ ಮಿಂಚಿ 11 ಅಂಕ ಗಳಿಸಿದರೂ ಗೆಲುವಿಗೆ ಸಾಕಾಗಲಿಲ್ಲ.
ಇತ್ತ ಮಣಿಂದರ್ ಸಿಂಗ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಬೆಂಗಾಲ್ ವಾರಿಯರ್ಸ್ ಪರ ರೈಡಿಂಗ್‌ನಲ್ಲಿ ನಿತಿನ್ ಕುಮಾರ್ 9, ವಿಶ್ವಾಸ್ 8 ಅಂಕ ಗಳಿಸಿದರು. ಟೈಟನ್ಸ್ ರೈಡರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಬೆಂಗಾಲ್ ಡಿಫೆಂಡರ್‌ಗಳಾದ ವೈಭವ್ ಗರ್ಜೆ 9, ಶುಭಮ್ ಶಿಂಧೆ 6 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.
ಇಂದಿನ ಪಂದ್ಯಗಳು
ಯುಪಿ ಯೋಧಾಸ್-ತಮಿಳ್ ತಲೈವಾಸ್, ರಾತ್ರಿ 8ಕ್ಕೆ
ಯು ಮುಂಬಾ-ಹರ್ಯಾಣ ಸ್ಟೀಲರ್ಸ್, ರಾತ್ರಿ 9ಕ್ಕೆ