ಸಾರಾಂಶ
ನವದೆಹಲಿ: ಪ್ಲೇ-ಆಫ್ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎನಿಸಿದ್ದ ಯು ಮುಂಬಾ ವಿರುದ್ಧದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗೆದ್ದು ಬೀಗಿದೆ. ಭಾನುವಾರ ಮಾಜಿ ಚಾಂಪಿಯನ್ ಬುಲ್ಸ್ 42-37 ಅಂಕಗಳಿಂದ ಜಯಗಳಿಸಿದ್ದು, ಅಂಕಪಟ್ಟಿಯಲ್ಲಿ 18 ಪಂದ್ಯಗಳಲ್ಲಿ 48 ಅಂಕಗಳೊಂದಿಗೆ 7ನೇ ಸ್ಥಾನಕ್ಕೇರಿದೆ. ಮುಂಬಾ 18ರಲ್ಲಿ 10ನೇ ಸೋಲನುಭವಿಸಿತು.
ಆರಂಭದಲ್ಲಿ ಸತತ ಅಂಕ ಸಂಪಾದಿಸಿ ಪಂದ್ಯದ ಮೇಲೆ ಮುಂಬಾ ಹಿಡಿತ ಸಾಧಿಸಿದ್ದರೂ, ಬಳಿಕ ಪುಟಿದೆದ್ದ ಬುಲ್ಸ್ ಮೊದಲಾರ್ಧಕ್ಕೆ ಹಿನ್ನಡೆಯನ್ನು 22-24ಕ್ಕೆ ಇಳಿಸಿತು.
ಆ ಬಳಿಕ ಅತ್ಯಾಕರ್ಷಕ ರೈಡಿಂಗ್ ಜೊತೆಗೆ ಡಿಫೆನ್ಸ್‌ನಲ್ಲೂ ಮಿಂಚಿದ ಬುಲ್ಸ್ ಸೇನೆ ಮುಂಬಾದ ರೈಡರ್‌ಗಳನ್ನು ಕಟ್ಟಿಹಾಕಿತು. ದ್ವಿತೀಯಾರ್ಧದಲ್ಲಿ ಮುಂಬಾಗೆ ಕೇವಲ 3 ರೈಡಿಂಗ್ ಅಂಕ ಬಿಟ್ಟುಕೊಟ್ಟು ಪಂದ್ಯವನ್ನು ತನ್ನತ್ತ ಒಲಿಸಿಕೊಂಡಿತು.
ಸುಶಿಲ್ ಸೂಪರ್-10 ಮೂಲಕ ಗಮನ ಸೆಳೆದರೆ, ಯುವ ರೈಡರ್ ರಕ್ಷಿತ್ 8 ಅಂಕ ಸಂಪಾದಿಸಿದರು. ಸುರ್ಜೀತ್ 6, ರಾಣ್ ಸಿಂಗ್ 5 ಟ್ಯಾಕಲ್ ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬಾದ ಜೈ ಭಗವಾನ್ 10 ಅಂಕ ಗಳಿಸಿದರು.
ಭಾನುವಾರದ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಗುಜರಾತ್ ಜೈಂಟ್ಸ್ 42-30 ಅಂಕಗಳಿಂದ ಗೆಲುವು ಸಾಧಿಸಿತು.
ಇಂದಿನ ಪಂದ್ಯಗಳು: ಜೈಪುರ-ಪಾಟ್ನಾ, ರಾತ್ರಿ 8ಕ್ಕೆ, ಡೆಲ್ಲಿ-ಪುಣೆ, ರಾತ್ರಿ 9ಕ್ಕೆ