ಸುಶೀಲ್‌ (22 ಅಂಕ) ಅಮೋಘ ಆಟದ ಜತೆಗೆ ಮೂರು ಬಾರಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್‌ 14 ಅಂಕಗಳಿಂದ ಗೆದ್ದು, ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿಗೆಲುವಿನೊಂದಿಗೆ ಹೋರಾಟ ಮುಗಿಸಿದೆ.

ಪಂಚಕುಲ: ಸುಶೀಲ್‌ (22 ಅಂಕ) ಅಮೋಘ ಆಟದ ಜತೆಗೆ ಮೂರು ಬಾರಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಆಲೌಟ್‌ ಮಾಡಿದ ಬೆಂಗಳೂರು ಬುಲ್ಸ್‌ 14 ಅಂಕಗಳಿಂದ ಗೆದ್ದು, ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯಲ್ಲಿಗೆಲುವಿನೊಂದಿಗೆ ಹೋರಾಟ ಮುಗಿಸಿದೆ.

ಈ ಫಲಿತಾಂಶದೊಂದಿಗೆ ಒಟ್ಟಾರೆ 53 ಅಂಕಗಳಿಸಿದ ಬೆಂಗಳೂರು ಬುಲ್ಸ್‌ 12 ತಂಡಗಳ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆಯಿತು. 

ಅತ್ತ ಹರಿಯಾಣ ಐದನೇ ಸ್ಥಾನದೊಂದಿಗೆ ಪ್ಲೇ-ಆಫ್‌ ಹಂತದಲ್ಲಿ ಸೆಣಸಾಟ ನಡೆಸಲು ವೇದಿಕೆ ಸಿದ್ಧಪಡಿಸಿಕೊಂಡಿತು.ತೌವ್‌ ದೇವಿಲಾಲ್‌ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ಪಂದ್ಯದಲ್ಲಿಬುಲ್ಸ್‌ 53-39 ಅಂಕಗಳಿಂದ ಸ್ಟೀಲರ್ಸ್‌ಗೆ ಆಘಾತ ನೀಡಿತು. 

ಸ್ಟೀಲರ್ಸ್‌ ಪರ ತೇಜಸ್‌ (11) ಗರಿಷ್ಠ ಅಂಕ ಗಳಿಸಿದರೆ, ಬುಲ್ಸ್‌ ಪರ ಸುಶೀಲ್‌ 22 ಅಂಕ ಗಳಿಸಿ ಜಯದಲ್ಲಿನಿರ್ಣಾಯಕ ಪಾತ್ರವಹಿಸಿದರು. 

ಮುನ್ನಡೆ ಗಳಿಸುವ ವಿಶ್ವಾಸದೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಇತ್ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಒತ್ತು ನೀಡಿದವು. 

ಆದಾಗ್ಯೂ 26-25ರಲ್ಲಿಮೇಲುಗೈ ಸಾಧಿಸಿದ ಹರಿಯಾಣ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಗುರಿಯತ್ತ ಮುನ್ನುಗ್ಗಿತು.

27ನೇ ನಿಮಿಷದಲ್ಲಿಹರಿಯಾಣ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್‌ ಆಟಗಾರರು 32-29ರಲ್ಲಿಮೇಲುಗೈ ಸಾಧಿಸಿದರು. ನಂತರ ಉಭಯ ತಂಡಗಳು ಮುನ್ನಡೆ ಪಡೆಯುವ ಹಾದಿಯಲ್ಲಿಹಾವು-ಏಣಿ ಆಟವಾಡಿದವು. 

ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳು ಬಾಕಿ ಇರುವಾಗ 36-33ರಲ್ಲಿಮೇಲುಗೈ ಸಾಧಿಸಿದ ಬುಲ್ಸ್‌, ಸ್ಟೀಲರ್ಸ್‌ ಮೇಲೆ ಒತ್ತಡ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿತು. 

ಅಂತೆಯೇ ರೈಡಿಂಗ್‌ ಮತ್ತು ಟ್ಯಾಕಲ್‌ ಎರಡರಲ್ಲೂ ಸಮಯೋಚಿತ ಆಟವಾಡಿದ ಬೆಂಗಳೂರು ತಂಡ 35ನೇ ನಿಮಿಷ ಮುಕ್ತಾಯದೊಳಗೆ ತಂಡದ ಅಂತರವನ್ನು 40-36ಕ್ಕೆ ವಿಸ್ತರಿಸಿಕೊಂಡಿತು.

ಪಂದ್ಯ ಕೊನೆಗೊಳ್ಳಲು ಕೇವಲ 2 ನಿಮಿಷಗಳಿರುವಾಗ ಮತ್ತೊಮ್ಮೆ ಸಾಂಘಿಕ ಹೋರಾಟ ನೀಡಿದ ಬೆಂಗಳೂರು ಹರಿಯಾಣ ತಂಡವನ್ನು ಮೂರನೇ ಬಾರಿ ಆಲೌಟ್‌ ಮಾಡಿತ್ತಲ್ಲದೆ, ಗೆಲುವನ್ನು ಖಚಿತಪಡಿಸಿಕೊಂಡಿತು. 

ಪಂದ್ಯದಲ್ಲಿ1 ಅಂಕ ಗಳಿಸಿದ ವಿಕಾಸ್‌ ಕಂಡೋಲಾ ಲೀಗ್‌ನಲ್ಲಿ800 ರೇಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಸಾಧನೆ ಮಾಡಿದರು.

ಸಮಬಲದ ಹೋರಾಟ ನೀಡಿದ ಬೆಂಗಳೂರು ಬುಲ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ಪಂದ್ಯದ ಮೊದಲಾರ್ಧಕ್ಕೆ 24-24 ಅಂಕಗಳಿಂದ ಸಮಬಲದ ಹೋರಾಟ ನೀಡಿದವು. 

ತಲಾ ಒಮ್ಮೆ ಆಲೌಟ್‌ ಮಾಡಿದ ಉಭಯ ತಂಡಗಳು, ಟ್ಯಾಕಲ್‌ ಮತ್ತು ರೇಡಿಂಗ್‌ನಲ್ಲಿಬಹುತೇಕ ಜಿದ್ದಾಜಿದ್ದಿನ ಸೆಣಸಾಟ ಮಾಡಿದವು. 

ಹ್ಯಾಟ್ರಿಕ್‌ ಸೋಲಿನಿಂದ ಹೊರಬರುವ ಹಾಗೂ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸುವ ಇರಾದೆಯಲ್ಲಿ ಆಡಿದ ಬೆಂಗಳೂರು ಬುಲ್ಸ್‌ ಪರ ಸುಶೀಲ್‌ ಸೂಪರ್‌ 10 ಸಾಹಸ ಮಾಡಿದರೆ, ವಿಶಾಲ್‌ ತಾಟೆ ಮತ್ತು ತೇಜಸ್‌ ಹರಿಯಾಣ ತಂಡದ ಹೋರಾಟಕ್ಕೆ ಬಲ ತಂದರು.

ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಪುಣೇರಿ ಪಲ್ಟನ್‌ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಗಳು ಸೆಮಿಫೈನಲ್ಸ್‌ಗೆ ನೇರ ಅರ್ಹತೆ ಗಳಿಸಿದರೆ, ದಬಾಂಗ್‌ ದಿಲ್ಲಿ, ಗುಜರಾತ್‌ ಜಯಂಟ್ಸ್‌ , ಹರಿಯಾಣ ಸ್ಟೀಲಸ್‌ ಮತ್ತು ಪಾಟ್ನಾ ಪೈರೇಟ್ಸ್‌ ತಂಡಗಳು ಪ್ಲೇ-ಆಫ್‌ ಹಂತದಲ್ಲಿ ಹೋರಾಟ ನಡೆಸಲಿವೆ. 

ಪುಣೇರಿ ಪಲ್ಟನ್‌ಗೆ ಅಗ್ರಸ್ಥಾನ: ಕರ್ನಾಟಕದ ಬಿ.ಸಿ.ರಮೇಶ್‌ ಮಾರ್ಗದರ್ಶನದ ಪುಣೇರಿ ಪಲ್ಟನ್‌ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಯು.ಪಿ.ಯೋಧಾಸ್‌ ವಿರುದ್ಧ 40-38ರ ರೋಚಕ ಗೆಲುವು ಸಾಧಿಸಿದ ಪುಣೆ, ಹಾಲಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.

ಈ ಪಂದ್ಯಕ್ಕೂ ಮುನ್ನ ಪುಣೆ 91 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿತ್ತು. ಯೋಧಾಸ್‌ ವಿರುದ್ಧ 7 ಅಂಕಗಳಿಗಿಂತ ಕಡಿಮೆ ಅಂತರದಲ್ಲಿ ಸೋತಿದ್ದರೂ, 1 ಅಂಕ ಸಿಗುತ್ತಿತ್ತು. ಆಗಲೂ ತಂಡ ಅಂಕ ವ್ಯತ್ಯಾಸ ಆಧಾರದಲ್ಲಿ ಅಗ್ರಸ್ಥಾನ ಪಡೆಯಿತ್ತು. 

ಆದರೆ, ಮೊದಲಾರ್ಧದಲ್ಲಿ 15-28ರಿಂದ ಹಿಂದಿದ್ದರೂ, ದ್ವಿತೀಯಾರ್ಧದಲ್ಲಿ ಪುಟಿದೆದ್ದ ಪುಣೆ ಗೆಲುವು ಸಂಪಾದಿಸಿತು. ಇದರೊಂದಿಗೆ 22 ಪಂದ್ಯಗಳಲ್ಲಿ ಬರೋಬ್ಬರಿ 17 ಗೆಲುವುಗಳೊಂದಿಗೆ 96 ಅಂಕ ಪಡೆದು ಮೊದಲ ಸ್ಥಾನ ಗಳಿಸಿತು. 

ತಂಡ ಸೋತಿದ್ದು ಕೇವಲ 2 ಪಂದ್ಯಗಳಲ್ಲಿ. 3 ಪಂದ್ಯಗಳನ್ನು ಟೈ ಮಾಡಿಕೊಂಡಿತು.ಮಿಂಚಿದ ಕನ್ನಡಿಗ ಗಗನ್‌: ಯು.ಪಿ.ಯೋಧಾಸ್‌ ಸೋಲುಂಡರೂ, ಕರ್ನಾಟಕದ ಯುವ ರೈಡರ್‌ ಗಗನ್‌ ಗೌಡ ಆಕರ್ಷಕ ಆಟವಾಡಿ ಗಮನ ಸೆಳೆದರು. 

16 ರೈಡ್‌ಗಳಲ್ಲಿ 16 ಅಂಕ ಗಳಿಸಿ ಪಂದ್ಯದಲ್ಲಿ ಅತಿಹೆಚ್ಚು ರೈಡ್‌ ಅಂಕ ಪಡೆದ ಆಟಗಾರ ಎನಿಸಿದರು. ಟೂರ್ನಿಯಲ್ಲಿ ಒಟ್ಟು 60 ಅಂಕ ಪಡೆದು, ಭರವಸೆ ಮೂಡಿಸಿದರು.