ಪ್ರೊ ಕಬಡ್ಡಿ : ಸೋಲಿನ ಸರಪಳಿ ಕಳಚದ ಬೆಂಗಳೂರು ಬುಲ್ಸ್‌ : 11 ಪಂದ್ಯಗಳಲ್ಲಿ 9ನೇ ಸೋಲು

| Published : Nov 19 2024, 12:53 AM IST / Updated: Nov 19 2024, 03:59 AM IST

ಸಾರಾಂಶ

ಸೋಲಿನ ಸರಪಳಿ ಕಳಚದ ಬೆಂಗಳೂರು ಬುಲ್ಸ್‌. 11 ಪಂದ್ಯಗಳಲ್ಲಿ 9ನೇ ಸೋಲು. 1 ಅಂಕದ ಅಂತರದಲ್ಲಿ ಸೋತು ನಿರಾಸೆಗೊಂಡ ಬೆಂಗಳೂರು ತಂಡ.

ನೋಯ್ಡಾ: ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ 11 ಪಂದ್ಯಗಳಲ್ಲಿ 9ನೇ ಸೋಲು ಅನುಭವಿಸಿದೆ. ಸೋಮವಾರ ಯು ಮುಂಬಾ ವಿರುದ್ಧ ನಡೆದ ಪಂದ್ಯದಲ್ಲಿ 37-38 ಅಂಕಗಳಲ್ಲಿ ವೀರೋಚಿತ ಸೋಲು ಕಂಡಿತು. ಕಳೆದ ಕೆಲ ಪಂದ್ಯಗಳಲ್ಲಿ ಅಂಕಣದಿಂದ ಹೊರಗಿದ್ದ ಪ್ರದೀಪ್‌ ನರ್ವಾಲ್‌ ಈ ಪಂದ್ಯದಲ್ಲಿ ಕಣಕ್ಕಿಳಿದು ಸೂಪರ್‌-10 (10 ರೈಡ್‌ ಅಂಕ) ದಾಖಲಿಸಿದರೂ, ಬುಲ್ಸ್‌ಗೆ ಗೆಲುವು ಒಲಿಯಲಿಲ್ಲ.

ಪಂದ್ಯದ ಮೊದಲಾರ್ಧ ಮುಕ್ತಾಯಗೊಂಡಾಗಲೂ 1 ಅಂಕ (20-21) ಹಿಂದಿದ್ದ ಬುಲ್ಸ್‌, ಕೊನೆಗೆ 1 ಅಂಕದಿಂದಲೇ ಸೋಲುಂಡಿತು. ಮುಂಬಾರ ಪರ ರೈಡರ್‌ಗಳಾದ ಅಜಿತ್‌ ಚೌಹಾಣ್‌ 10, ಮನ್‌ಜೀತ್‌ 9 ಅಂಕ ಗಳಿಸಿ ಗೆಲುವಿಗೆ ಸಹಕರಿಸಿದರು. ಈ ಜಯರೊಂದಿಗೆ ಮುಂಬಾ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಸ್ಟೀಲರ್ಸ್‌ಗೆ ಸೋಲು: ಸತತ 5 ಜಯದೊಂದಿಗೆ ಮುನ್ನುಗ್ಗುತ್ತಿದ್ದ ಹರ್ಯಾಣ ಸ್ಟೀಲರ್ಸ್‌ಗೆ ಸೋಮವಾರ ತೆಲುಗು ಟೈಟಾನ್ಸ್ ವಿರುದ್ಧ 27-49ರ ಅಚ್ಚರಿಯ ಸೋಲು ಎದುರಾಯಿತು. ಆದರೂ, ಹರ್ಯಾಣ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.