ಸಾರಾಂಶ
ನಾಸಿರ್ ಸಜಿಪ
ಹೈದರಾಬಾದ್ : 2018ರ ಬಳಿಕ ಮತ್ತೊಮ್ಮೆ ಟ್ರೋಫಿ ಗೆಲ್ಲುವ ನಿರೀಕ್ಷೆಯೊಂದಿಗೆ 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ಗೆ ಕಾಲಿಟ್ಟ ಬೆಂಗಳೂರು ಬುಲ್ಸ್, ಆರಂಭಿಕ ಪಂದ್ಯದಲ್ಲೇ ಸೋಲಿನ ಆಘಾತಕ್ಕೆ ಒಳಗಾಗಿದೆ. ರೈಡರ್‌ಗಳ ಕಳಪೆ ಆಟ, ರಕ್ಷಣಾ ಪಡೆಯ ಸಾಧಾರಣ ಪ್ರದರ್ಶನದಿಂದಾಗಿ ಬುಲ್ಸ್ ತಂಡ ಶುಕ್ರವಾರ ತೆಲುಗು ಟೈಟಾನ್ಸ್ ವಿರುದ್ಧ 29-37 ಅಂಕಗಳ ಅಂತರದಲ್ಲಿ ಪರಾಭವಗೊಂಡಿತು.
ನಗರದ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ತವರಿನ ಅಭಿಮಾನಿಗಳ ಬೆಂಬಲದ ನಡುವೆ ಅತ್ಯುತ್ಸಾಹದೊಂದಿಗೇ ಅಂಕಣಕ್ಕಿಳಿದ ಟೈಟಾನ್ಸ್, ಪಂದ್ಯದ ಆರಂಭ ಮತ್ತು ಕೊನೆಯಲ್ಲಿ ಮೇಲುಗೈ ಸಾಧಿಸಿ ಜಯಭೇರಿ ಬಾರಿಸಿತು. ಮೊದಲಾರ್ಧದಲ್ಲಿ 11-20ರ ಹಿನ್ನಡೆ ಅನುಭವಿಸಿ, ದ್ವಿತೀಯಾರ್ಧದ ಆರಂಭದಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದರೂ ಬುಲ್ಸ್‌ಗೆ ಗೆಲುವು ದಕ್ಕಲಿಲ್ಲ.
ಮೊದಲ 20 ನಿಮಿಷ ಬುಲ್ಸ್ ರೈಡರ್‌ಗಳು ತೀರ ಸಪ್ಪೆಯಾಗಿದ್ದರು. ಈ ಹಂತದಲ್ಲಿ ತಂಡದ ರೈಡ್ ಯಶಸ್ಸು ಕೇವಲ ಶೇ. 22.22. ತಂಡ 5 ರೈಡ್ ಅಂಕ ಗಳಿಸಿತು. 15ನೇ ನಿಮಿಷದಲ್ಲಿ ಆಲೌಟಾದ ಬುಲ್ಸ್, ಮತ್ತೆ ತೀವ್ರ ಹಿನ್ನಡೆಗೊಳಗಾಯಿತು. ಮೊದಲಾರ್ಧದಲ್ಲಿ 9 ಅಂಕದಿಂದ ಹಿಂದಿದ್ದ ಬುಲ್ಸ್, 2ನೇ ಅವಧಿಯಲ್ಲಿ ತಿರುಗಿಬಿತ್ತು. ಕೇವಲ 10 ನಿಮಿಷದಲ್ಲಿ 12 ಅಂಕ ದೋಚಿತು.
ಒಂದು ಹಂತದಲ್ಲಿ ಬುಲ್ಸ್(23-24) ಕೇವಲ 1 ಅಂಕ ಹಿನ್ನಡೆಯಲ್ಲಿತ್ತು. ಆದರೆ ಟೈಟಾನ್ಸ್ ಮೈಡಕೊವಿ ಎದ್ದು ನಿಂತು, ಮತ್ತೆ ಸತತ ಅಂಕ ಗಳಿಸಿತು. ಕೊನೆ 10 ನಿಮಿಷದಲ್ಲಿ ಮತ್ತೆ ಅಧಿಪತ್ಯ ಸಾಧಿಸಿತು. ಕೊನೆ 6 ನಿಮಿಷವಿರುವಾಗ ಆಲೌಟಾದ ಬುಲ್ಸ್ ಬಳಿಕ ಚೇತರಿಸಿಕೊಳ್ಳಲು ಅವಕಾಶ ಸಿಗಲಿಲ್ಲ. ಬುಲ್ಸ್‌ನ ರೈಡರ್‌ಗಳನ್ನು ಕಟ್ಟಿಹಾಕುವುದರ ಜೊತೆಗೆ, ರಕ್ಷಣಾಪಡೆಯನ್ನೂ ಮೆಟ್ಟಿನಿಂತ ಟೈಟಾನ್ಸ್ 8 ಅಂಕಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.ಬುಲ್ಸ್ ನಾಯಕ ಪ್ರದೀಪ್ ನರ್ವಾಲ್ 14 ರೈಡ್‌ಗಳಲ್ಲಿ ಕೇವಲ 3 ಅಂಕ ಗಳಿಸಿದರು. 13 ರೈಡ್ ಅಂಕ ಸಂಪಾದಿಸಿದ ಪವನ್ ಶೆರಾವತ್ ಟೈಟಾನ್ಸ್ ಗೆಲುವಿನ ರೂವಾರಿ ಎನಿಸಿಕೊಂಡರು.
ಇನ್ನು, ಶುಕ್ರವಾರ ನಡೆದ 2ನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಾಂಗ್ ಡೆಲ್ಲಿ 36-28ರ ಗೆಲುವು ಸಾಧಿಸಿತು. ಇಂದಿನ ಪಂದ್ಯಗಳು: ಟೈಟಾನ್ಸ್ vs ತಲೈವಾಸ್, ರಾತ್ರಿ 8ಕ್ಕೆ, ಪುಣೇರಿ vs ಹರ್ಯಾಣ, ರಾತ್ರಿ 9ಕ್ಕೆ