ಪ್ರೊ ಕಬಡ್ಡಿ: 3 ಸೋಲುಗಳ ಬಳಿಕ ಕೊನೆಗೂ ಗೆದ್ದ ಬೆಂಗ್ಳೂರು ಬುಲ್ಸ್‌

| Published : Sep 07 2025, 01:00 AM IST

ಸಾರಾಂಶ

ಪಾಟ್ನಾ ವಿರುದ್ಧ 38-30ರಲ್ಲಿ ಜಯ. ರೈಡರ್‌ಗಳಾದ ಅಲಿರೆಜಾ ಮಿರ್ಜಯಾನ್‌ 10, ಆಶೀಶ್‌ ಮಲಿಕ್‌ 8 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಶಾಖಪಟ್ಟಣಂ: 12ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ತಂಡ ಗೆಲುವಿನ ಹಳಿಗೆ ಮರಳಿದೆ. ಆರಂಭಿಕ 3 ಪಂದ್ಯಗಳಲ್ಲಿ ಸೋತಿದ್ದ ಬುಲ್ಸ್‌, ಶನಿವಾರ ಪಾಟ್ನಾ ಪೈರೇಟ್ಸ್‌ ವಿರುದ್ಧ 38-30 ಅಂಕಗಳ ಅಂತರದಲ್ಲಿ ಜಯಗಳಿಸಿತು. ತಂಡಕ್ಕಿದು 4 ಪಂದ್ಯಗಳಲ್ಲಿ ಮೊದಲ ಜಯ. ಪಾಟ್ನಾ ಆಡಿದ 3 ಪಂದ್ಯಗಳಲ್ಲೂ ಸೋಲನುಭವಿಸಿತು.

ಮೊದಲಾರ್ಧದಲ್ಲೇ ಆಲೌಟಾಗಿ ಬುಲ್ಸ್‌ ಆರಂಭದಲ್ಲೇ ಹಿನ್ನಡೆ ಅನುಭವಿಸಿತ್ತು. ಆದರೆ ಬಳಿಕ ಪುಟಿದೆದ್ದ ತಂಡ, ಆರಂಭಿಕ 20 ನಿಮಿಷಗಳ ಆಟ ಮುಕ್ತಾಯಕ್ಕೆ 18-15ರಲ್ಲಿ ಮುನ್ನಡೆ ಗಳಿಸಿತು. ದ್ವಿತೀಯಾರ್ಧದಲ್ಲೂ ಮಿಂಚಿನ ಆಟವಾಡಿದ ತಂಡ, ಅರ್ಹವಾಗಿಯೇ ಗೆಲುವು ತನ್ನದಾಗಿಸಿಕೊಂಡಿತು. ರೈಡರ್‌ಗಳಾದ ಅಲಿರೆಜಾ ಮಿರ್ಜಯಾನ್‌ 10, ಆಶೀಶ್‌ ಮಲಿಕ್‌ 8 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಾಟ್ನಾದ ಅಯಾನ್‌(10 ಅಂಕ) ಹೋರಾಟ ವ್ಯರ್ಥವಾಯಿತು.ದಿನದ 2ನೇ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ಗುಜರಾತ್‌ ಜೈಂಟ್ಸ್‌ 37-28 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಗುಜರಾತ್‌ ಆಡಿದ 3ರಲ್ಲಿ ಮೊದಲ ಗೆಲುವು ದಾಖಲಿಸಿದರೆ, ತಲೈವಾಸ್‌ 3ರಲ್ಲಿ 2ನೇ ಸೋಲು ಕಂಡಿತು.

ಇಂದಿನ ಪಂದ್ಯಗಳು

ಬೆಂಗಾಲ್‌-ತೆಲುಗು ಟೈಟಾನ್ಸ್‌, ರಾತ್ರಿ 8ಕ್ಕೆ

ದಬಾಂಗ್‌ ಡೆಲ್ಲಿ-ಜೈಪುರ, ರಾತ್ರಿ 9ಕ್ಕೆ