ಸಾರಾಂಶ
ಬೆಂಗಳೂರು: ಈ ಬಾರಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ಸತತ 2ನೇ ಗೆಲುವು ಸಾಧಿಸಿದೆ. ಗುರುವಾರ ನಗರದ ಕಂಠೀವರ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ಎಫ್‌ಸಿ ವಿರುದ್ಧ ಪಂದ್ಯದಲ್ಲಿ ಚೆಟ್ರಿ ಪಡೆ 3-0 ಗೋಲುಗಳ ಗೆಲುವು ಸಾಧಿಸಿತು. 5ನೇ ನಿಮಿಷದಲ್ಲೇ ರಾಹುಲ್ ಭೇಕೆ ಗೋಲು ಬಾರಿಸಿ ಬಿಎಫ್‌ಸಿ ಮುನ್ನಡೆಗೆ ಕಾರಣರಾದರು.
ಬಳಿಕ 85ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗೋಲು ಬಾರಿಸಿದ ಸುನಿಲ್ ಚೆಟ್ರಿ, 94ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಆರಂಭಿಕ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ ಗೆದ್ದಿದ್ದ ಬಿಎಫ್‌ಸಿಗೆ ಸೆ.28ರಂದು ಮೋಹನ್ ಬಗಾನ್ ಸವಾಲು ಎದುರಾಗಲಿದೆ.
ಚೀನಾ ಬ್ಯಾಡ್ಮಿಂಟನ್: ಮಾಳವಿಕಾ ಕ್ವಾರ್ಟರ್‌ಗೆ
ಚೆಂಗ್ಡು(ಚೀನಾ): ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಯುವ ಶಟ್ಲರ್ ಮಾಳವಿಕಾ ಬನ್ಸೋದ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.43 ಮಾಳವಿಕಾ ಅವರು ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೋರ್ ವಿರುದ್ಧ 21-17, 19-21, 21-16 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು.
2 ಬಾರಿ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಕ್ರಿಸ್ಟಿ 2ನೇ ಗೇಮ್‌ನಲ್ಲಿ ಪುಟಿದೆದ್ದು ಉತ್ತಮ ಆಟ ಪ್ರದರ್ಶಿಸಿದರೂ, ಮಾಳವಿಕಾ ವಿರುದ್ಧ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಇದೇ ಮೊದಲ ಬಾರಿ ಸೂಪರ್ 1000 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೇರಿರುವ ಮಾಳವಿಕಾಗೆ ಜಪಾನ್‌ನ ಅಕಾನೆ ಯಮಗುಚಿ ಸವಾಲು ಎದುರಾಗಲಿದೆ. ಟೂರ್ನಿಯಲ್ಲಿ ಸದ್ಯ ಭಾರತದ ಮಾಳವಿಕಾ ಮಾತ್ರ ಕಣದಲ್ಲಿದ್ದಾರೆ.