ಸಾರಾಂಶ
ಬೆಂಗಳೂರು : 2024ರ ಆವೃತ್ತಿಯ ರಾಷ್ಟ್ರೀಯ ಸ್ಪ್ರಿಂಟ್ ರ್‍ಯಾಲಿ ಚಾಂಪಿಯನ್‌ಶಿಪ್‌ನ 2ನೇ ಚರಣ ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದೆ. ಇದು ದಕ್ಷಿಣ ವಲಯದ ಅರ್ಹತಾ ರ್‍ಯಾಲಿ ಆಗಿದ್ದು, ಅಗ್ರ 5 ಸ್ಥಾನ ಪಡೆದ ರೈಡರ್‌ಗಳು ವರ್ಷಾಂತ್ಯದಲ್ಲಿ ಪುಣೆಯಲ್ಲಿ ನಡೆಯಲಿರುವ ಫೈನಲ್ಸ್‌ಗೆ ಪ್ರವೇಶ ಪಡೆಯಲಿದ್ದಾರೆ.
ಶುಕ್ರವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಆಯೋಜಕರು ಮಾಹಿತಿ ನೀಡಿದರು. ಸರ್ಜಾಪುರದಲ್ಲಿ 7 ಕಿ.ಮೀ. ಉದ್ದದ ಟ್ರ್ಯಾಕ್‌ನಲ್ಲಿ ರೇಸ್ ನಡೆಯಲಿದ್ದು, ವಿವಿಧ ವಿಭಾಗಗಳಲ್ಲಿ 140 ರೈಡರ್‌ಗಳು ಪಾಲ್ಗೊಳ್ಳಲಿದ್ದಾರೆ. ತಾರಾ ರೈಡರ್‌ಗಳಾದ ಅಸಾದ್ ಖಾನ್, ಸಚಿನ್, ಸುಹೈಲ್ ಅಹ್ಮದ್, ಯುವ ಕುಮಾರ್ ಸೇರಿದಂತೆ ಪ್ರಮುಖರು ಸ್ಪರ್ಧಿಸಲಿದ್ದಾರೆ. ಮಹಿಳಾ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದ್ದು, ಐವರು ರೈಡರ್‌ಗಳು ಪಾಲ್ಗೊಳ್ಳಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮೋಟಾರ್‌ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶಾಂತಪ್ಪ, ಎಫ್‌ಬಿ ಮೋಟಾರ್‌ಸ್ಪೋರ್ಟ್ಸ್‌ನ ಅಮಿತ್ ಅರೋರಾ, ಫರಾದ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.
ವಿಶ್ವ ಸೂಪರ್‌ಬೈಕ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಮೊದಲ ರೈಡರ್ ಕೆವಿನ್
ಚೆನ್ನೈ: ಶುಕ್ರವಾರದಿಂದ ಚೆಕ್ ಗಣರಾಜ್ಯದ ಮೋಸ್ಟ್ ಎಂಬಲ್ಲಿ ನಡೆಯಲಿರುವ ವಿಶ್ವ ಸೂಪರ್‌ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೆವಿನ್ ಕ್ವಿಂಟಾಲ್ ಸ್ಪರ್ಧಿಸಲಿದ್ದಾರೆ. ಈ ಮೂಲಕ ವಿಶ್ವ ಸೂಪರ್‌ಬೈಕ್‌ನಲ್ಲಿ ಸ್ಪರ್ಧಿಸಲಿರುವ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
19 ವರ್ಷದ ಕೆವಿನ್ ಐರ್ಲೆಂಡ್‌ನ ರೆಟ್ರೊ ಟ್ರಾಫಿಕ್ ಕವಾಸಕಿ ತಂಡದ ಸದಸ್ಯರಾಗಿದ್ದಾರೆ. ತಂಡದ ಪ್ರಮುಖ ರೈಡರ್ ಡ್ಯಾನಿಲ್ ಮೊಗೇಡ ಗಾಯಗೊಂಡ ಕಾರಣ ಕೆವಿನ್‌ಗೆ ಅವಕಾಶ ಲಭಿಸಿದೆ. 13ನೇ ವರ್ಷದಲ್ಲೇ ರೈಡಿಂಗ್ ಆರಂಭಿಸಿದ್ದ ಚೆನ್ನೈನ ಕೆವಿನ್ 2021, 2023ರಲ್ಲಿ ಭಾರತದ ಟ್ಯಾಲೆಂಟ್ ಕಪ್‌ನಲ್ಲಿ ಚಾಂಪಿಯನ್ ಆಗಿದ್ದರು.