ನಾಯಕ ರೋಹಿತ್‌ರನ್ನೇ ಕೈ ಬಿಟ್ಟು ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲ್ಲಲು ಟೀಂ ಇಂಡಿಯಾ ಪ್ಲ್ಯಾನ್‌?

| Published : Jan 03 2025, 12:31 AM IST / Updated: Jan 03 2025, 04:14 AM IST

ಸಾರಾಂಶ

ಸರಣಿ, ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌, ಹಿರಿಯ ಆಟಗಾರರ ಭವಿಷ್ಯ ನಿರ್ಧರಿಸುವ ಆಸ್ಟ್ರೇಲಿಯಾ ವಿರುದ್ಧ 5ನೇ ಟೆಸ್ಟ್‌ ಇಂದಿನಿಂದ ಶುರು. ಸರಣಿ ಉಳಿಸಿಕೊಳ್ಳುತ್ತಾ ಭಾರತ?. ಮಹತ್ವದ ಬದಲಾವಣೆ ಸಾಧ್ಯತೆ. ರೋಹಿತ್‌ಗೆ ಗೇಟ್‌ಪಾಸ್‌?. ಬೂಮ್ರಾಗೆ ಮತ್ತೆ ನಾಯಕತ್ವ ನಿರೀಕ್ಷೆ

ಸಿಡ್ನಿ: ಮೆಲ್ಬರ್ನ್‌ ಟೆಸ್ಟ್‌ನ ಆಘಾತಕಾರಿ ಸೋಲು ಭಾರತ ತಂಡವನ್ನು ಇನ್ನಿಲ್ಲದಂತೆ ಕುಗ್ಗಿಸಿದೆ. ಒಂದೆಡೆ ಸರಣಿ ಸೋಲಿನ ಭೀತಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ನಿಂದ ಹೊರಬೀಳುವ ಆತಂಕ. 

ಮತ್ತೊಂದೆಡೆ ನಾಯಕ ರೋಹಿತ್‌ ಶರ್ಮಾ ಸೇರಿ ಕೆಲ ತಾರಾ ಆಟಗಾರರು ತಂಡದಿಂದಲೇ ಹೊರಬೀಳುವಂತಹ ಪರಿಸ್ಥಿತಿ. ಹೀಗಾಗಿಯೇ ಶುಕ್ರವಾರ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧ 5ನೇ ಹಾಗೂ ಕೊನೆ ಟೆಸ್ಟ್‌ ಪಂದ್ಯ ಭಾರತದ ಪಾಲಿಗೆ ಅಗ್ನಿಪರೀಕ್ಷೆ.ಪರ್ತ್‌ ಟೆಸ್ಟ್‌ನಲ್ಲಿ ಗೆದ್ದ ಹೊರತಾಗಿಯೂ 4 ಟೆಸ್ಟ್‌ಗಳ ಬಳಿಕ ಭಾರತ ಸದ್ಯ 1-2ರಿಂದ ಹಿನ್ನಡೆಯಲ್ಲಿದೆ. ಈಗಾಗಲೇ ಸರಣಿ ಗೆಲುವಿನ ನಿರೀಕ್ಷೆಯನ್ನು ಕೈಚೆಲ್ಲಿರುವ ಭಾರತ ತಂಡ, ಸೋಲನ್ನು ತಪ್ಪಿಸಿಕೊಳ್ಳಲು ಹೋರಾಡಬೇಕಿದೆ. ಅತ್ತ ಆಸೀಸ್‌ ದಶಕದ ಬಳಿಕ ಭಾರತ ವಿರುದ್ಧ ಸರಣಿ ಜಯದ ಕಾತರದಲ್ಲಿದೆ.

ತಂಡದಲ್ಲಿ ಮೇಜರ್‌ ಸರ್ಜರಿ: ಭಾರತ ತಂಡ ಸಿಡ್ನಿ ಟೆಸ್ಟ್‌ನಲ್ಲೂ ಕೆಲ ಬದಲಾವಣೆಗಳೊಂದಿಗೆ ಆಡುವುದು ಖಚಿತ. ನಾಯಕ ರೋಹಿತ್‌ ಶರ್ಮಾಗೆ ಈ ಪಂದ್ಯದಲ್ಲಿ ‘ವಿಶ್ರಾಂತಿ’ ನೀಡುವ ಸಾಧ್ಯತೆ ಹೆಚ್ಚು. ಹೀಗಾಗಿ ಕೆ.ಎಲ್‌.ರಾಹುಲ್‌ ಆರಂಭಿಕನಾಗಿ ಆಡಬೇಕಾಗುತ್ತದೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ಶುಭ್‌ಮನ್‌ ಗಿಲ್‌ ಮತ್ತೆ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಾದರೂ ಅಬ್ಬರಿಸಬಲ್ಲರೇ ಎಂಬ ಕುತೂಹಲವಿದೆ.

ರಿಷಭ್‌ ಬದಲು ಜುರೆಲ್‌?: ತಂಡದಲ್ಲಿ ಈಗ ರಿಷಭ್‌ ಪಂತ್‌ ಸ್ಥಾನದ ಬಗ್ಗೆಯೂ ಗೊಂದಲ, ಅನುಮಾನ ಮೂಡಿದೆ. ತಮ್ಮ ಶಾಟ್‌ಗಳ ಆಯ್ಕೆಯಲ್ಲಿ ಎಡವುತ್ತಿರುವ ರಿಷಭ್‌ ಪಂತ್‌ ಈ ಪಂದ್ಯದಿಂದ ಹೊರಬಿದ್ದರೂ ಅಚ್ಚರಿಯಿಲ್ಲ. ತಂಡದ ನಿರ್ಣಾಯಕ ಸಂದರ್ಭದಲ್ಲಿ ಕೆಟ್ಟ ಹೊಡೆತಗಳ ಮೂಲಕ ವಿಕೆಟ್‌ ಒಪ್ಪಿಸುತ್ತಿರುವ ರಿಷಭ್‌ರನ್ನು ಸಿಡ್ನಿ ಟೆಸ್ಟ್‌ನಿಂದ ಹೊರಗಿಟ್ಟು ಪಾಠ ಕಲಿಸಲು ಆಯ್ಕೆ ಸಮಿತಿ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅವರು ಹೊರಬಿದ್ದರೆ ಧ್ರುವ್‌ ಜುರೆಲ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಕಾಶ್‌ದೀಪ್‌ ಔಟ್‌: ಬೆನ್ನು ನೋವಿನಿಂದ ಬಳಲುತ್ತಿರುವ ಭಾರತದ ಯುವ ವೇಗಿ ಆಕಾಶ್‌ದೀಪ್‌ ಸಿಂಗ್‌ ಕೊನೆ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರು ಬದಲು ಹರ್ಷಿತ್‌ ರಾಣಾ ಅಥವಾ ಪ್ರಸಿದ್ಧ್‌ ಕೃಷ್ಣ ಆಡಬಹುದು. ಹರ್ಷಿತ್‌ ಮೊದಲೆರಡು ಪಂದ್ಯ ಆಡಿದ್ದರು. ಆದರೆ 3ನೇ ಸ್ಪೆಲ್‌ ವೇಳೆ ಅವರ ವೇಗ ಕಡಿಮೆಯಾಗುತ್ತಿದ್ದು, ಈ ಕಾರಣಕ್ಕೆ ಅವರ ಬದಲು ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಮಣೆ ಹಾಕುವ ಸಾಧ್ಯತೆ ಹೆಚ್ಚು.

ಮಾರ್ಷ್‌ ಹೊರಕ್ಕೆ: ಆಸ್ಟ್ರೇಲಿಯಾ ತಂಡ ಕೂಡಾ ಈ ಪಂದ್ಯದಲ್ಲಿ ಬದಲಾವಣೆಯೊಂದಿಗೆ ಆಡಲಿದೆ. ಆರಂಭಿಕ 4 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಮಿಚೆಲ್‌ ಮಾರ್ಷ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಬದಲು ಬ್ಯೂ ವೆಬ್‌ಸ್ಟೆರ್‌ ಕೊನೆ ಪಂದ್ಯದಲ್ಲಿ ಆಡಲಿದ್ದಾರೆ ಎಂದು ನಾಯಕ ಪ್ಯಾಟ್‌ ಕಮಿನ್ಸ್‌ ಖಚಿತಪಡಿಸಿಕೊಂಡಿದ್ದಾರೆ. 

ಪಿಚ್‌ ರಿಪೋರ್ಟ್‌: ಸಿಡ್ನಿ ಕ್ರಿಕೆಟ್ ಗ್ರೌಂಡ್ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಆರಂಭಿಕ ದಿನಗಳಲ್ಲಿ ಹೆಚ್ಚಿನ ಬೌನ್ಸರ್‌ಗಳೂ ಕಂಡು ಬರಲಿವೆ. ಆದರೆ ಪಿಚ್ ಪರಿಸ್ಥಿತಿ ಕ್ರಮೇಣ ಬದಲಾಗುತ್ತವೆ. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು. ಈ ಕ್ರೀಡಾಂಗಣದಲ್ಲಿ ಬಹುತೇಕ ಪಂದ್ಯಗಳು 5 ದಿನಗಳ ವರೆಗೂ ಸಾಗುತ್ತದೆ.

ರೋಹಿತ್‌ ಸ್ಥಾನಕ್ಕೆ ಕುತ್ತು: ಬೂಮ್ರಾ ಕಾಯಂ ನಾಯಕ?

ಭಾರತದ ಖಾಯಂ ನಾಯಕ ರೋಹಿತ್‌ರ ಕಳಪೆ ಪ್ರದರ್ಶನ ತಂಡದಲ್ಲಿ ಅವರ ಸ್ಥಾನಕ್ಕೇ ಕುತ್ತು ತಂದಿದೆ. ಈ ಪಂದ್ಯದಲ್ಲಿ ಅವರು ಆಡುವುದೇ ಅನುಮಾನ. ಒಂದು ವೇಳೆ ರೋಹಿತ್‌ ಸಿಡ್ನಿ ಟೆಸ್ಟ್‌ನಲ್ಲಿ ಆಡದಿದ್ದರೆ, ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಬಿದ್ದ ಭಾರತದ ಮೊದಲ ನಾಯಕ ಎಂಬ ಅಪಖ್ಯಾತಿಗೆ ಗುರಿಯಾಗಲಿದ್ದಾರೆ. ಅವರು ಹೊರಬಿದ್ದರೆ ವೇಗಿ ಜಸ್‌ಪ್ರೀತ್‌ ಬೂಮ್ರಾ ತಂಡದ ನಾಯಕತ್ವ ವಹಿಸಲಿದ್ದಾರೆ. ಬೂಮ್ರಾ ಭವಿಷ್ಯದಲ್ಲಿ ತಂಡದ ಕಾಯಂ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಯೂ ಇದೆ. ಪರ್ತ್‌ ಟೆಸ್ಟ್‌ನಲ್ಲಿ ರೋಹಿತ್‌ ಗೈರಿನಲ್ಲಿ ಬೂಮ್ರಾ ತಂಡವನ್ನು ಮುನ್ನಡೆಸಿದ್ದರು. ಭಾರತ ಆಡಿದ ಕಳೆದ 7 ಪಂದ್ಯಗಳ ಪೈಕಿ ಗೆದ್ದಿದ್ದು ಪರ್ತ್‌ ಟೆಸ್ಟ್‌ನಲ್ಲಿ ಮಾತ್ರ ಎಂಬುದು ಗಮನಾರ್ಹ.

ರೋಹಿತ್ ಆಡುವ ಬಗ್ಗೆ ಮಾಹಿತಿ ನೀಡದ ಗೌತಿ

ರೋಹಿತ್‌ ಆಡುವ ಬಗ್ಗೆ ಕೋಚ್‌ ಗೌತಮ್‌ ಗಂಭೀರ್‌ ಕೂಡಾ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ‘ಪಿಚ್‌ ಗಮನಿಸಿದ ಬಳಿಕ ಆಡುವ 11ರ ಬಳಗವನ್ನು ನಿರ್ಧರಿಸುತ್ತೇವೆ’ ಎಂದಷ್ಟೇ ಪತ್ರಿಕಾಗೋಷ್ಠಿಯಲ್ಲಿ ಗಂಭೀರ್‌ ತಿಳಿಸಿದ್ದಾರೆ. ಇದರೊಂದಿಗೆ ರೋಹಿತ್‌ ಈ ಪಂದ್ಯದಲ್ಲಿ ಹೊರಗುಳಿಯಬಹುದು ಎಂಬ ಸುಳಿವು ಒದಗಿಸಿದ್ದಾರೆ.

ಸಿಡ್ನಿಯಲ್ಲಿ ಭಾರತ ಗೆದ್ದಿದ್ದು ಒಮ್ಮೆ ಮಾತ್ರ

ಭಾರತ ತಂಡ ಸಿಡ್ನಿಯಲ್ಲಿ ಉತ್ತಮ ದಾಖಲೆಯೇನೂ ಹೊಂದಿಲ್ಲ. ತಂಡ ಈ ಕ್ರೀಡಾಂಗಣದಲ್ಲಿ ಈ ವರೆಗೂ 13 ಪಂದ್ಯಗಳನ್ನಾಡಿದ್ದು, ಕೇವಲ 1ರಲ್ಲಿ ಗೆದ್ದಿದೆ. 1978ರಲ್ಲಿ ಬಿಷನ್‌ ಸಿಂಗ್‌ ಬೇಡಿ ನಾಯಕತ್ವದಲ್ಲಿ ಭಾರತ ಏಕೈಕ ಗೆಲುವು ಸಾಧಿಸಿತ್ತು. ಉಳಿದ 5 ಪಂದ್ಯಗಳಲ್ಲಿ ಸೋತಿದ್ದರೆ, 7 ಪಂದ್ಯಗಳು ಡ್ರಾಗೊಂಡಿವೆ.

ಸೋತರೆ ಭಾರತ ಟೆಸ್ಟ್‌ ಫೈನಲ್‌ ರೇಸ್‌ನಿಂದ ಔಟ್‌

2023-25ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಗೆದ್ದರೆ ಭಾರತದ ಗೆಲುವಿನ ಪ್ರತಿಶತ ಶೇ.55.26ಕ್ಕೆ ಹೆಚ್ಚಳವಾಗುತ್ತದೆ. ಅತ್ತ ಶ್ರೀಲಂಕಾ ವಿರುದ್ಧ 2 ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾ ಗೆಲ್ಲದಿದ್ದರೆ ಭಾರತಕ್ಕೆ ಫೈನಲ್‌ಗೇರಬಹುದು. ಒಂದು ವೇಳೆ ಸಿಡ್ನಿಯಲ್ಲಿ ಭಾರತ ಸೋತರೆ ರೇಸ್‌ನಿಂದ ಹೊರಬೀಳಲಿದೆ. ಪಂದ್ಯ ಡ್ರಾಗೊಂಡರೂ ಭಾರತಕ್ಕೆ ಫೈನಲ್‌ಗೇರಲು ಸಾಕಾಗುವುದಿಲ್ಲ. ಆಗ ದ.ಆಫ್ರಿಕಾ-ಆಸ್ಟ್ರೇಲಿಯಾ ಫೈನಲ್‌ಗೇರಲಿವೆ.