ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾಗೆ ಮತ್ತಷ್ಟು ಸಂಕಷ್ಟ. ಶುಕ್ರವಾರ ಕೆ.ಎಲ್‌.ರಾಹುಲ್‌ ಕೈಗೆ ಚೆಂಡು ಬಡಿದಿದ್ದರೆ, ವಿರಾಟ್‌ ಕೊಹ್ಲಿ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು.

ಪರ್ತ್‌: ಕಳೆದ ಬಾರಿಯಂತೆ ಈ ಸಲವೂ ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್‌ ಸರಣಿಗೆ ಭಾರತ ತಂಡ ಗಾಯಾಳುಗಳ ಸಮಸ್ಯೆ ಎದುರಿಸುವ ಎಲ್ಲಾ ಸಾಧ್ಯತೆಗಳಿವೆ. ಶನಿವಾರ ತಾರಾ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಎಡಗೈ ಹೆಬ್ಬೆರಳು ಮುರಿತಕ್ಕೊಳಗಾಗಿದ್ದು, ನ.22ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ನಿಂದ ಬಹುತೇಕ ಹೊರಬಿದ್ದಿದ್ದಾರೆ.

ಅಭ್ಯಾಸ ಪಂದ್ಯದ 2ನೇ ದಿನ ಫೀಲ್ಡಿಂಗ್‌ ನಿರತರಾಗಿದ್ದ ಗಿಲ್‌ ಎಡಗೈ ಹೆಬ್ಬೆರಳಿಗೆ ಚೆಂಡು ಬಡಿದಿದೆ. ಸಾಧಾರಣವಾಗಿ ಹೆಬ್ಬೆರಳು ಮುರಿತಕ್ಕೊಳಗಾದರೆ ಅದರಿಂದ ಚೇತರಿಸಿಕೊಳ್ಳಲು 14 ದಿನ ಅಗತ್ಯವಿದೆ. ಆದರೆ ಮೊದಲ ಟೆಸ್ಟ್‌ಗೆ ಒಂದು ವಾರ ಮಾತ್ರ ಬಾಕಿ ಇದ್ದು, ಪಂದ್ಯದಲ್ಲಿ ಗಿಲ್‌ ಆಡುವುದು ಅನುಮಾನವೆನಿಸಿದೆ. 

ಒಂದು ವೇಳೆ ಗಿಲ್‌ ಅಲಭ್ಯರಾದರೆ ಅಭಿಮನ್ಯು ಈಶ್ವರನ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.ಇದಕ್ಕೂ ಮುನ್ನ ಶುಕ್ರವಾರ ಕೆ.ಎಲ್‌.ರಾಹುಲ್‌ ಕೈಗೆ ಚೆಂಡು ಬಡಿದಿದ್ದರೆ, ವಿರಾಟ್‌ ಕೊಹ್ಲಿ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು. ಇವರಿಬ್ಬರ ಗಾಯದ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆ ತಂಡ ಇನ್ನೂ ಸ್ಪಷ್ಟ ಮಾಹಿತಿ ಹಂಚಿಕೊಂಡಿಲ್ಲ.