ಬಳ್ಳಾರಿಯ ನಂದಿನಿಗೆ ಕಂಚು

| Published : Oct 06 2023, 01:16 AM IST

ಸಾರಾಂಶ

ಏಷ್ಯನ್ ಕ್ರೀಡಾಕೂಟದ ಹೆಪ್ಟಥ್ಲಾನ್‌ನಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ ಅವರು ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್ ಮೂಲದವರು. ಯುವತಿಯ ಸಾಧನೆಗೆ ಜಿಲ್ಲೆಯ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಕೆ.ಎಂ. ಮಂಜುನಾಥ್ ಕನ್ನಡಪ್ರಭ ವಾರ್ತೆ ಬಳ್ಳಾರಿ ಏಷ್ಯನ್ ಕ್ರೀಡಾಕೂಟದ ಹೆಪ್ಟಥ್ಲಾನ್‌ನಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ ಅವರು ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್ ಮೂಲದವರು. ಯುವತಿಯ ಸಾಧನೆಗೆ ಜಿಲ್ಲೆಯ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಕ್ರೀಡಾಕೂಟದಲ್ಲಿ ನಂದಿನಿ ಅಗಸರ ಅವರು ಕಂಚಿನ ಪದಕ ಪಡೆಯುವ ದೃಶ್ಯದ ವೀಡಿಯೋ ವೈರಲ್ ಆಗಿದ್ದು, ಎಲ್ಲೆಡೆಯಿಂದ ಶುಭಾಶಯಗಳ ಸುರುಮಳೆ. ಮೂಲತಃ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮಕ್ಕೆ ಸೇರಿರುವ ಯಲ್ಲಪ್ಪ ದಂಪತಿಯು ಕುಟುಂಬ ನಿರ್ವಹಣೆಗಾಗಿ ನಂದಿನಿ ಮೂರು ತಿಂಗಳಿದ್ದಾಗಲೇ ಮಗುವಿನೊಂದಿಗೆ ಶ್ರೀನಗರ ಕ್ಯಾಂಪ್‌ಗೆ ಸ್ಥಳಾಂತರವಾಗಿದ್ದರು. ಯಲ್ಲಪ್ಪ ಅವರ ಕುಟುಂಬ ಈ ಮೊದಲು ಬಳ್ಳಾರಿ ತಾಲೂಕಿನ ಬಗ್ಗೂರು ಕ್ಯಾಂಪ್, ನಂತರ ಸಿರುಗುಪ್ಪದ ಆದೋನಿ ರಸ್ತೆಯಲ್ಲಿರುವ ಶ್ರೀನಗರ ಕ್ಯಾಂಪಿಗೆ ಹೋಗಿದೆ. ಅಲ್ಲಿನ ಮನೆಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ ಶುಭ್ರಗೊಳಿಸಿ ಇಸ್ತ್ರಿ ಮಾಡಿ ಕೊಡುವ ಮೂಲಕ ಜೀವನ ನಡೆಸುತ್ತಿದ್ದರು. ಹೈದ್ರಾಬಾದ್‌ಗೆ ವಲಸೆ: ಸಿರುಗುಪ್ಪದಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದ್ದಂತೆಯೇ ಯಲ್ಲಪ್ಪ ನಂದಿನಿ ಜನಿಸಿ 3 ತಿಂಗಳ ನಂತರ ತೆಲಂಗಾಣದ ಹೈದ್ರಾಬಾದ್‌ಗೆ ಸೇರಿಕೊಳ್ಳುತ್ತಾರೆ. ನಂದಿನಿ ಅಲ್ಲಿಯೇ ಶಿಕ್ಷಣ ಪಡೆಯುತ್ತಾಳೆ. ನಿರಂತರ ಶ್ರಮದ ಮೂಲಕ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ನಂದಿನಿ ಅವರಿಗೆ ಅನೇಕರು ನೆರವಿಗೆ ನಿಲ್ಲುತ್ತಾರೆ. ಮಗಳ ಕ್ರೀಡಾಸಕ್ತಿಯನ್ನು ತಂದೆ ಗುರುತಿಸಿ ಪ್ರೋತ್ಸಾಹಿಸುತ್ತಾರೆ. ಪರಿಣಾಮ; ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಹೆಪ್ಟಥ್ಲಾನ್‌ನಲ್ಲಿ ಕಂಚಿನ ಪದಕ ವಿಜೇತಳಾಗಿ ವಿಶ್ವದ ಗಮನ ಸೆಳೆದಿದ್ದಾಳೆ ನಂದಿನಿ. ನಂದಿನಿಯ ಅಜ್ಜ, ಅಜ್ಜಿ, ದೊಡ್ಡಪ್ಪ ಹಾಗೂ ದೊಡ್ಡಮ್ಮ ಅವರು ಶ್ರೀನಗರದಲ್ಲಿಯೇ ವಾಸವಾಗಿದ್ದರು. ಕಳೆದ ವರ್ಷ ನಂದಿನಿ ದೊಡ್ಡಪ್ಪ ಶಂಕರ್ ಹಾಗೂ ಅಜ್ಜ ಈರಣ್ಣನವರು ಮೃತಪಟ್ಟ ಬಳಿಕ ಇಡೀ ಕುಟುಂಬ ಹೈದ್ರಾಬಾದ್‌ಗೆ ಸ್ಥಳಾಂತರವಾಗಿದೆ. ಹೆಪ್ಟಥ್ಲಾನ್ ? ಹೆಪ್ಟಥ್ಲಾನ್ ಎಂದರೆ 100 ಹರ್ಡಲ್ಸ್, ಹೈ ಜಂಪ್, ಶಾಟ್ ಪುಟ್, 200 ಮೀ ರನ್ನಿಂಗ್, ಲಾಂಗ್ ಜಂಪ್, ಜಾವಲಿನ್ ಥ್ರೋ ಮತ್ತು 800 ಮೀಟರ್ ರನ್ನಿಂಗ್ ಒಟ್ಟು ಏಳು ಈವೆಂಟ್ ಗಳಲ್ಲಿ ಪಾಲ್ಗೊಳ್ಳುವುದಾಗಿದೆ. ಈ ಎಲ್ಲಾ ಏಳು ಈವೆಂಟ್‌ಗಳಲ್ಲಿ ಪಡೆದ ಅಂಕಗಳ ಮೇಲೆ ಪದಕ ನಿರ್ಧಾರವಾಗಲಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಬಳ್ಳಾರಿ ಜಿಲ್ಲೆಯ ನಂದಿನಿ ಅಗಸರ ಸಾಧನೆ ಮಾಡಿರುವುದು ಅತೀವ ಸಂತಸ ತಂದಿದೆ. ಜಿಲ್ಲೆಯ ಕೀರ್ತಿ ವಿಶ್ವಮಟ್ಟದಲ್ಲಿ ಬೆಳಗಿದಂತಾಗಿದೆ. ನಂದಿನಿ ಸಾಧನೆ ಕುರಿತು ಇಡೀ ಜಿಲ್ಲೆಯ ಜನರು ಹಾಡಿ ಹೊಗಳುತ್ತಿದ್ದಾರೆ. ನಿಜಕ್ಕೂ ನಮ್ಮ ಜಿಲ್ಲೆಗೆ ಕೀರ್ತಿ ತಂದ ಕೆಲಸ. ನಂದಿನಿ ಅವರು ಕ್ರೀಡಾಕ್ಷೇತ್ರದಲ್ಲಿ ಮತ್ತಷ್ಟೂ ಸಾಧನೆ ಮಾಡಲಿ. ಸಿದ್ಧರಾಮೇಶ್ವರ ಕರೂರು, ಕ್ರೀಡಾಸಕ್ತರು ಹಾಗೂ ಲೆಕ್ಕ ಪರಿಶೋಧಕರು, ಬಳ್ಳಾರಿ