ಸಾರಾಂಶ
ಲಾಹೋರ್: ಭಾರತ ಹಾಗೂ ಪಾಕಿಸ್ತಾನ ನಡುವೆ ಕಳೆದ 12 ವರ್ಷಗಳಿಂದ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಎಂಬಂತೆ ‘2 ದೇಶಗಳ ಗಡಿಯಲ್ಲಿ ಕ್ರೀಡಾಂಗಣ ನಿರ್ಮಿಸಬೇಕು’ ಎಂದು ಪಾಕ್ ಮಾಜಿ ಕ್ರಿಕೆಟಿಗ ಅಹಮದ್ ಶಹಜಾದ್ ನೀಡಿರುವ ಹೇಳಿಕೆ ಭಾರಿ ಟ್ರೋಲ್‌ಗೆ ಒಳಗಾಗಿದೆ.
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ 33 ವರ್ಷದ ಶಹಜಾದ್, ‘ಗಡಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ನಾನು ಸಲಹೆ ನೀಡಿದ್ದೆ. ಕ್ರೀಡಾಂಗಣದ ಒಂದು ಗೇಟ್ ಭಾರತದಲ್ಲಿ, ಮತ್ತೊಂದು ಗೇಟ್ ಪಾಕಿಸ್ತಾನದಲ್ಲಿರಲಿ. ಆಯಾಯ ದೇಶದ ಆಟಗಾರರು ಅವರದೇ ಗೇಟ್‌ನಲ್ಲಿ ಕ್ರೀಡಾಂಗಣ ಪ್ರವೇಶಿಸಬಹುದು’ ಎಂದು ಹೇಳಿದ್ದಾರೆ.
‘ಹೀಗೆ ಮಾಡಿದರೂ ಬಿಸಿಸಿಐ ಹಾಗೂ ಅಲ್ಲಿನ ಸರ್ಕಾರಕ್ಕೆ ಸಮಸ್ಯೆಯಾಗುತ್ತದೆ. ಕ್ರೀಡಾಂಗಣದ ನಮ್ಮ ಭಾಗಕ್ಕೆ ಅವರ ಆಟಗಾರರು ಬರಬೇಕಿದ್ದರೆ ವೀಸಾ ಬೇಕಾಗುತ್ತದೆ. ಅದನ್ನು ಅವರ ಸರ್ಕಾರ ಕೊಡಲ್ಲ’ ಎಂದಿದ್ದಾರೆ. ಶಹಜಾದ್‌ರ ಈ ಹೇಳಿಕೆಗೆ ಹಲವರು ವ್ಯಂಗ್ಯವಾಡಿದ್ದು, ಪಾಕ್ ಆಟಗಾರರಿಂದ ಈ ರೀತಿ ಮೂರ್ಖತನದ ಹೇಳಿಕೆಗಳು ಆಗಾಗ ಬರುತ್ತಲೇ ಇರುತ್ತವೆ ಎಂದು ಟೀಕಿಸಿದ್ದಾರೆ. ಭಾರತ ಹಾಗೂ ಪಾಕ್ ತಂಡ ಸದ್ಯ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿದೆ.