ಸಾರಾಂಶ
ಕ್ಯಾಲ್ಗರಿ(ಕೆನಡಾ): ಭಾರತದ ಉದಯೋನ್ಮುಖ ಶಟ್ಲರ್ ಪ್ರಿಯಾನ್ಶು ರಾಜಾವತ್, ವಿಶ್ವ ನಂ.4 ಆ್ಯಂಡರ್ಸ್ ಆ್ಯಂಟನ್ಸನ್ ವಿರುದ್ಧ ಗೆಲ್ಲುವ ಮೂಲಕ ಕೆನಡಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.39 ಪ್ರಿಯಾನ್ಶು, ಡೆನ್ಮಾರ್ಕ್ ಆಟಗಾರನ ವಿರುದ್ಧ 21-11, 17-21, 21-19 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದು 22 ವರ್ಷದ ಪ್ರಿಯಾನ್ಶುಗೆ ವಿಶ್ವದ ಅಗ್ರ-10 ಆಟಗಾರರ ವಿರುದ್ಧ ಲಭಿಸಿದ ಮೊದಲ ಗೆಲುವು. ಸೆಮೀಸ್‌ನಲ್ಲಿ ಅವರು ಫ್ರಾನ್ಸ್‌ನ ಅಲೆಕ್ಸ್ ಲೇನಿಯರ್ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಚೈನೀಸ್ ತೈಪೆಯ ಪೆಯ್ ಶಾ ಹಾಗೂ ಎನ್ ತ್ಸು ಹುಂಗ್ ವಿರುದ್ಧ 18-21, 21-19, 16-21 ಗೇಮ್‌ಗಳಲ್ಲಿ ಸೋತು ಅಭಿಯಾನ ಕೊನೆಗೊಳಿಸಿದರು.
ಇಂದು ಪ್ಯಾರಿಸ್ ಡೈಮಂಡ್ ಲೀಗ್: ಜೆನಾ, ಸಾಬ್ಳೆ ಸ್ಪರ್ಧೆ
ಪ್ಯಾರಿಸ್: ಒಲಿಂಪಿಕ್ಸ್‌ಗೆ ಅಂತಿಮ ಹಂತದ ಸಿದ್ಧತೆ ನಡೆಸುವ ಗುರಿಯೊಂದಿಗೆ ಭಾರತೀಯ ಅಥ್ಲೀಟ್‌ಗಳಾದ ಕಿಶೋರ್ ಜೆನಾ ಹಾಗೂ ಅವಿನಾಶ್ ಸಾಬ್ಳೆ, ಭಾನುವಾರ ಇಲ್ಲಿ ನಡೆಯಲಿರುವ ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಜಾವೆಲಿನ್ ಥ್ರೋನಲ್ಲಿ ಜೆನಾ ಕಣಕ್ಕಿಳಿಯಲಿದ್ದು, 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಸ್ಪರ್ಧೆಗಿಳಿಯಲಿದ್ದಾರೆ. ಕೆಲಸದ ಒತ್ತಡ ನಿರ್ವಹಣೆ ದೃಷ್ಟಿಯಿಂದ ನೀರಜ್ ಚೋಪ್ರಾ ಈ ಕೂಟಕ್ಕೆ ಗೈರಾಗಲು ನಿರ್ಧರಿಸಿದ್ದಾರೆ. ಜೆನಾ ಹಾಗೂ ಸಾಬ್ಳೆ ಇಬ್ಬರೂ ಇತ್ತೀಚೆಗೆ ಲಯದ ಸಮಸ್ಯೆ ಎದುರಿಸುತ್ತಿದ್ದು, ಈ ಕೂಟದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.