ಕ್ಯಾಂಡಿಡೇಟ್ಸ್‌ ಚೆಸ್‌: ಜಂಟಿ ನಂ.1 ಸ್ಥಾನದಿಂದ ಗುಕೇಶ್‌ ಕೆಳಕ್ಕೆ

| Published : Apr 19 2024, 01:02 AM IST / Updated: Apr 19 2024, 04:33 AM IST

ಸಾರಾಂಶ

ಸದ್ಯ ಗುಕೇಶ್‌ 6.5 ಅಂಕದೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದರೆ, ರಷ್ಯಾದ ಇಯಾನ್‌ ನೆಪೊಮ್ನಿಯಾಚಿ 7 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಟೊರೊಂಟೊ: ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯ 11ನೇ ಸುತ್ತಿನಲ್ಲಿ ಭಾರತದ ಡಿ.ಗುಕೇಶ್‌ ಅಗ್ರಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದು, ಜಂಟಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ. 

ಸದ್ಯ ಗುಕೇಶ್‌ 6.5 ಅಂಕದೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದರೆ, ರಷ್ಯಾದ ಇಯಾನ್‌ ನೆಪೊಮ್ನಿಯಾಚಿ 7 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.ಇದೇ ವೇಳೆ ಪ್ರಜ್ಞಾನಂದ ಹಾಗೂ ವಿದಿತ್‌ ಗುಜರಾತಿ ಕ್ರಮವಾಗಿ ಅಮೆರಿಕದ ಹಿಕರು ನಕಮುರಾ ಹಾಗೂ ನೆಪೊಮ್ನಿಯಾಚಿ ವಿರುದ್ಧ ಪರಾಭವಗೊಂಡರು. ಮಹಿಳಾ ವಿಭಾಗದಲ್ಲಿ ಆರ್‌.ವೈಶಾಲಿ ಸತತ 2ನೇ ಜಯ ದಾಖಲಿಸಿದ್ದಾರೆ. ಅವರು ಬುಧವಾರ ಮಧ್ಯರಾತ್ರಿ ರಷ್ಯಾದ ಅಲೆಕ್ಸಾಂಡ್ರಾ ವಿರುದ್ಧ ಗೆದ್ದರೆ, ಕೊನೆರು ಹಂಪಿ ಅವರು ಬಲ್ಗೇರಿಯಾದ ಸಲಿಮೋವಾ ಅವರನ್ನು ಸೋಲಿಸಿದರು.

ಶ್ರೀಶಂಕರ್‌ಗೆ ಗಾಯ: ಒಲಿಂಪಿಕ್ಸ್‌ನಿಂದ ಔಟ್‌

ನವದೆಹಲಿ: ಭಾರತದ ತಾರಾ ಲಾಂಗ್‌ ಜಂಪ್‌ ಪಟು ಶ್ರೀಶಂಕರ್‌ ಮುರಳಿ ಅಭ್ಯಾಸದ ವೇಳೆ ಮಂಡಿ ಗಾಯಕ್ಕೆ ತುತ್ತಾಗಿದ್ದು, ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ ಸೇರಿದಂತೆ 2024ರ ಋತುವಿನಿಂದಲೇ ಹೊರಬಿದ್ದಿದ್ದಾರೆ. ಟ್ವೀಟರ್‌ನಲ್ಲಿ ಸ್ವತಃ ಶ್ರೀಶಂಕರ್‌ ಈ ವಿಷಯ ಬಹಿರಂಗಪಡಿಸಿದ್ದಾರೆ. ಏಷ್ಯನ್‌ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಶ್ರೀಶಂಕರ್‌, ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 8.37 ಮೀ. ದೂರಕ್ಕೆ ನೆಗೆದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

ಏಷ್ಯಾ ಒಲಿಂಪಿಕ್‌ ಅರ್ಹತಾ ಕುಸ್ತಿ ಟೂರ್ನಿ ಇಂದು ಶುರು

ಬಿಶ್ಕೆಕ್‌(ಕಿರ್ಗಿಸ್ತಾನ): ಏಷ್ಯಾ ಒಲಿಂಪಿಕ್‌ ಅರ್ಹತಾ ಕುಸ್ತಿ ಟೂರ್ನಿ ಶುಕ್ರವಾರದಿಂದ ಆರಂಭವಾಗಲಿದ್ದು, ಭಾರತದಿಂದ ಒಟ್ಟು 17 ಕುಸ್ತಿಪಟುಗಳು ಕಣಕ್ಕಿಳಿಯಲಿದ್ದಾರೆ. 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿರುವ 2 ಬಾರಿ ಒಲಿಂಪಿಯನ್‌ ವಿನೇಶ್‌ ಫೋಗಟ್‌ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಫ್ರೀಸ್ಟೈಲ್‌, ಮಹಿಳಾ ಹಾಗೂ ಗ್ರೀಕೊ-ರೋಮನ್‌ ವಿಭಾಗಗಳ 18 ವರ್ಗಗಳಲ್ಲಿ 36 ಕೋಟಾಗಳು ಲಭ್ಯವಿದೆ. ಸದ್ಯ ಕುಸ್ತಿಯಲ್ಲಿ ಭಾರತದಿಂದ 19ರ ಅಂತಿಮ್‌ ಪಂಘಲ್‌(53 ಕೆ.ಜಿ.) ಮಾತ್ರ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.