ಕ್ಯಾಂಡಿಡೇಟ್ಸ್‌ ಚೆಸ್‌: ವಿದಿತ್, ಪ್ರಜ್ಞಾನಂದಗೆ ಗೆಲುವು

| Published : Apr 12 2024, 01:01 AM IST / Updated: Apr 12 2024, 04:34 AM IST

ಸಾರಾಂಶ

ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಮುಂದುವರಿದ ಭಾರತ ಪುರುಷರ ಪ್ರಾಬಲ್ಯ. 6ನೇ ಸುತ್ತಿನಲ್ಲಿ ಪ್ರಜ್ಞಾನಂದ, ವಿದಿತ್‌ ಗುಜರಾತಿಗೆ ಗೆಲುವು. ಡ್ರಾ ಸಾಧಿಸಿ ಅಗ್ರಸ್ಥಾನ ಕಾಯ್ದುಕೊಂಡ ಡಿ.ಗುಕೇಶ್‌. ವೈಶಾಲಿ, ಕೊನೆರು ಹಂಪಿಗೆ ನಿರಾಸೆ.

ಟೊರೊಂಟೊ: ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಆಡಲು ಅರ್ಹತೆಗಾಗಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್‌ ಮಾಸ್ಟರ್‌ಗಳಾದ ಆರ್‌.ಪ್ರಜ್ಞಾನಂದ ಹಾಗೂ ವಿದಿತ್‌ ಗುಜರಾತಿ 6ನೇ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಇದೇ ವೇಳೆ 6ನೇ ಸುತ್ತಿನಲ್ಲಿ ಡಿ.ಗುಕೇಶ್‌ ಡ್ರಾ ಸಾಧಿಸಿ ಜಂಟಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. 

ಪ್ರಜ್ಞಾನಂದ ಅಜರ್‌ಬೈಜಾನ್‌ನ ನಿಜತ್‌ ಅಬಸೊವ್‌ ವಿರುದ್ಧ ಗೆದ್ದರೆ, ಫ್ರಾನ್ಸ್‌ನ ಅಲಿರೇಜಾ ವಿರುದ್ಧ ವಿದಿತ್‌ ಗೆಲುವು ಸಾಧಿಸಿದರು. ಇನ್ನು ಅಮೆರಿಕದ ಹಿಕಾರು ನಕಮುರಾ ವಿರುದ್ಧ ಗುಕೇಶ್‌ ಡ್ರಾ ಸಾಧಿಸಿದರು.ಇನ್ನೂ 8 ಸುತ್ತುಗಳು ಬಾಕಿ ಇದ್ದು, 4 ಅಂಕ ಹೊಂದಿರುವ 17 ವರ್ಷದ ಗುಕೇಶ್‌, ರಷ್ಯಾದ ಇಯಾನ್‌ ನೆಪೋನ್ಮಿಯಾಚಿ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಇದೇ ವೇಳೆ ಮಹಿಳೆಯರ ವಿಭಾಗದ 6ನೇ ಸುತ್ತಿನಲ್ಲಿ ಆರ್‌.ವೈಶಾಲಿ ಹಾಗೂ ಕೊನೆರು ಹಂಪಿ ಇಬ್ಬರೂ ಸೋಲುಂಡರು.ಏಷ್ಯಾ ಬ್ಯಾಡ್ಮಿಂಟನ್‌: ಸಿಂಧು, ಪ್ರಣಯ್‌ಗೆ ಸೋಲು

ನಿಂಗ್ಬೋ(ಚೀನಾ): ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಪ್ರಿ ಕ್ವಾರ್ಟರ್‌ನಲ್ಲಿ ಪಿ.ವಿ.ಸಿಂಧು, ಎಚ್‌.ಎಸ್‌.ಪ್ರಣಯ್‌ ಇಬ್ಬರೂ ಸೋತು ಹೊರಬಿದ್ದರು. ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಂಧುಗೆ ಚೀನಾದ ಹಾನ್‌ ಯೂಹಿ ವಿರುದ್ಧ 18-21, 21-13, 17-21 ಗೇಮ್‌ಗಳಲ್ಲಿ ಸೋಲು ಎದುರಾಯಿತು. ಈ ಪಂದ್ಯಕ್ಕೂ ಮುನ್ನ ಸಿಂಧು, ಹಾನ್‌ ವಿರುದ್ಧ ಸತತ 5 ಪಂದ್ಯಗಳನ್ನು ಗೆದ್ದಿದ್ದರು. ಇನ್ನು ಪ್ರಣಯ್‌, ಚೈನೀಸ್‌ ತೈಪೆಯ ಲಿನ್‌ ಚುನ್‌ ಯೀ ವಿರುದ್ಧ 18-21, 11-21ರಲ್ಲಿ ಪರಾಭವಗೊಂಡರು. ಮಹಿಳಾ ಡಬಲ್ಸ್‌ನ ಪ್ರಿ ಕ್ವಾರ್ಟರಲ್ಲಿ ಅಶ್ವಿನಿ-ತನಿಶಾ ಜೋಡಿಗೂ ಸೋಲು ಎದುರಾಯಿತು.