ಕಿಂಗ್‌ ಕಾರ್ಲೋಸ್‌: ಸತತ 2ನೇ ವಿಂಬಲ್ಡನ್‌ ಗೆದ್ದ ಯುವ ಸೂಪರ್‌ ಸ್ಟಾರ್‌

| Published : Jul 15 2024, 01:50 AM IST / Updated: Jul 15 2024, 04:26 AM IST

ಸಾರಾಂಶ

ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ದಿಗ್ಗಜ ಟೆನಿಸಿಗ ನೋವಾಕ್‌ ಜೋಕೋವಿಚ್‌ ವಿರುದ್ಧ ನೇರ ಸೆಟ್‌ಗಳಲ್ಲಿ ಗೆದ್ದ ಸ್ಪೇನ್‌ನ 21ರ ಕಾರ್ಲೋಸ್‌. 4ನೇ ಗ್ರ್ಯಾನ್‌ಸ್ಲಾಂ ಕಿರೀಟ. 2ನೇ ಬಾರಿ ವಿಂಬಲ್ಡನ್‌ ಫೈನಲ್‌ನಲ್ಲಿ ಜೋಕೋಗೆ ಆಲ್ಕರಜ್‌ ಶಾಕ್‌. ಜೋಕೋ 25ನೇ ಟ್ರೋಫಿ ಕನಸು ಭಗ್ನ

ಲಂಡನ್‌: ಟೆನಿಸ್‌ ಲೋಕದ ಹೊಸ ಸೂಪರ್‌ ಸ್ಟಾರ್‌ ಕಾರ್ಲೋಸ್‌ ಆಲ್ಕರಜ್‌ ಮತ್ತೊಮ್ಮೆ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಕಿರೀಟ ಗೆದ್ದಿದ್ದಾರೆ. ಸರಿಸಾಟಿಯಿಲ್ಲದ ಟೆನಿಸಿಗ ಎಂದೇ ಕರೆಸಿಕೊಳ್ಳುವ ದಿಗ್ಗಜ ನೋವಾಕ್‌ ಜೋಕೋವಿಚ್‌ಗೆ ಮತ್ತೊಮ್ಮೆ ಆಘಾತ ನೀಡುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡ ಆಲ್ಕರಜ್‌, ಟೆನಿಸ್‌ ಲೋಕವನ್ನು ಇನ್ನಷ್ಟು ವರ್ಷಗಳ ಕಾಲ ಆಳುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

 ಇದರೊಂದಿಗೆ ಜೋಕೋವಿಚ್‌ ತಮ್ಮ 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿಗೆ ಇನ್ನಷ್ಟು ಸಮಯ ಕಾಯುವಂತಾಗಿದೆ.ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಸ್ಪೇನ್‌ನ 21 ವರ್ಷದ ಆಲ್ಕರಜ್‌, 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, 7 ಬಾರಿ ವಿಂಬಲ್ಡನ್‌ ಚಾಂಪಿಯನ್‌ ಜೋಕೋವಿಚ್‌ ವಿರುದ್ಧ 6-2, 6-2, 7-6(7/4) ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ವಿಶ್ವ ನಂ.2 ಜೋಕೋವಿಚ್‌ರ ಮೇಲೆ ಆಲ್ಕರಜ್‌ ಎಷ್ಟರ ಮಟ್ಟಿಗೆ ಪ್ರಾಬಲ್ಯ ಸಾಧಿಸಿದರು ಎಂದರೆ ಪಂದ್ಯ ಕೇವಲ ಎರಡೂವರೆ ಗಂಟೆಗಳಲ್ಲೇ ಮುಕ್ತಾಯಗೊಂಡಿತು. 

ಫೈನಲ್‌ ಕದನ ಒನ್‌ ಮ್ಯಾನ್‌ ಶೋಗೆ ಸಾಕ್ಷಿಯಾಯಿತು. ಆಲ್ಕರಜ್‌ ಮೊದಲ ಸೆಟ್‌ನಲ್ಲಿ 6-2 ಸುಲಭ ಗೆಲುವು ತಮ್ಮದಾಗಿಸಿಕೊಂಡಾಗ 2ನೇ ಸೆಟ್‌ನಲ್ಲಿ ಜೋಕೋ ತಿರುಗೇಟು ನೀಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ವೇಗದ ಸರ್ವ್, ಬಲಿಷ್ಠ ಹೊಡೆತ, ರಾಕೆಟ್‌ನಂತೆ ಬರುತ್ತಿದ್ದ ಚೆಂಡನ್ನು ಅಷ್ಟೇ ವೇಗದಲ್ಲಿ ಹಿಂದಿರುಗಿಸುತ್ತಿದ್ದ ಆಲ್ಕರಜ್‌ರ ಕೌಶಲ್ಯದ ಎದುರು ಜೋಕೋವಿಚ್‌ರ ಆಟ ನಗಣ್ಯವಾಗಿ ತೋರಿತು. 

ಜೋಕೋವಿಚ್‌ ತಮ್ಮ 2 ದಶಕಗಳ ವೃತ್ತಿಬದುಕಿನಲ್ಲಿ ಇಷ್ಟೊಂದು ರಕ್ಷಣಾತ್ಮಕವಾಗಿ ಆಡಿ ಪಂದ್ಯ ಉಳಿಸಿಕೊಳ್ಳಲು ಹೋರಾಡಿದ್ದನ್ನು ಅಭಿಮಾನಿಗಳು ನೋಡಿಯೇ ಇರಲಿಲ್ಲ. ಜೋಕೋವಿಚ್‌ರನ್ನು ಇಷ್ಟರ ಮಟ್ಟಿಗೆ ಕಾಡಿದ ಮತ್ತೋರ್ವ ಆಟಗಾರ ಇಲ್ಲ ಎಂಬಂತಿತ್ತು ಆಲ್ಕರಜ್‌ರ ಆಟ.3ನೇ ಸೆಟ್‌ನಲ್ಲಿ 5-4ರ ಮುನ್ನಡೆ ಹೊಂದಿದ್ದ ಆಲ್ಕರಜ್‌, ಪ್ರಶಸ್ತಿಗಾಗಿ ಸರ್ವ್‌ ಮಾಡಿದರು. 3 ಚಾಂಪಿಯನ್‌ಶಿಪ್‌ ಪಾಯಿಂಟ್‌ಗಳನ್ನು ರಕ್ಷಿಸಿಕೊಂಡ ಜೋಕೋ, 6-6 ಗೇಮ್‌ಗಳಲ್ಲಿ ಸಮಬಲ ಸಾಧಿಸಿ, ಸೆಟ್‌ ಟೈ ಬ್ರೇಕರ್‌ಗೆ ಹೋಗುವಂತೆ ಮಾಡಿದರು. ಟೈ ಬ್ರೇಕರ್‌ನಲ್ಲಿ ಆಲ್ಕರಜ್‌ಗೆ ಹೊಡೆತಗಳಿಗೆ ಜೋಕೋ ಬಳಿ ಉತ್ತರಗಳಿರಲಿಲ್ಲ.

ಫೆಡರರ್‌ ಸಾಲಿಗೆ ಆಲ್ಕರಜ್‌!

ಆಲ್ಕರಜ್‌ 4 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲೂ ಗೆಲ್ಲುವ ಮೂಲಕ ದಿಗ್ಗಜ ಆಟಗಾರ ರೋಜರ್ ಫೆಡರರ್‌ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಫೆಡರರ್‌ ತಮ್ಮ ಮೊದಲ 7 ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲೂ ಗೆದ್ದಿದ್ದರು.