ಸಾರಾಂಶ
ನ್ಯೂಯಾರ್ಕ್: ಚೆಸ್ ಇತಿಹಾಸದಲ್ಲೇ ಅಪರೂಪದ ಕ್ಷಣಕ್ಕೆ ಈ ಬಾರಿ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್ ಸಾಕ್ಷಿಯಾಗಿದೆ. 5 ಬಾರಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಹಾಗೂ ರಷ್ಯಾದ ಇಯಾನ್ ನೆಪೋಮ್ನಿಯಾಚಿ ಈ ಬಾರಿ ಬ್ಲಿಟ್ಜ್ ಕೂಟದಲ್ಲಿ ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಈ ರೀತಿ ಇಬ್ಬರು ಪ್ರಶಸ್ತಿ ಹಂಚಿಕೊಂಡಿದ್ದು ಚೆಸ್ ಇತಿಹಾಸದಲ್ಲಿ ಇದೇ ಮೊದಲು.ಬುಧವಾರ ಜಿದ್ದಾಜಿದ್ದಿನಿಂದ ನಡೆದ ಫೈನಲ್ ಪಂದ್ಯದಲ್ಲಿ ನಾರ್ವೆ ಹಾಗೂ ರಷ್ಯಾದ ಆಟಗಾರರ ತಲಾ 2-2 ಅಂಕಗಳೊಂದಿಗೆ ಸಮಬಲ ಸಾಧಿಸಿದರು. ಹೀಗಾಗಿ ಫಲಿತಾಂಶ ನಿರ್ಧರಿಸಲು ‘ಸಡನ್ ಡೆತ್’ ಮೊರೆ ಹೋಗಲಾಯಿತು. ಆದರೆ 3 ಬಾರಿ ಸಡನ್ ಡೆತ್ ನಡೆಸಿದರೂ ಪಂದ್ಯಗಳು ಟೈ ಆದವು. ಹೀಗಾಗಿ ಇಬ್ಬರೂ ಸ್ಪರ್ಧಿಗಳು ಪ್ರಶಸ್ತಿ ಹಂಚಿಕೊಳ್ಳಲು ನಿರ್ಧರಿಸಿದರು. ‘ದಿನವಿಡೀ ಹೋರಾಡಿದೆವು. ಫಲಿತಾಂಶ ಬರಲಿಲ್ಲ. ಪಂದ್ಯ ಮುಗಿಸಲು ಇದಕ್ಕಿಂತ ಬೇರೆ ಮಾರ್ಗವಿರಲಿಲ್ಲ’ ಎಂದು ಪಂದ್ಯದ ಬಳಿಕ ಮ್ಯಾಗ್ನಸ್ ಪ್ರತಿಕ್ರಿಯಿಸಿದ್ದಾರೆ.
ಫಿಕ್ಸಿಂಗ್ ಆರೋಪ!
ಪ್ರಶಸ್ತಿ ಹಂಚಿಕೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಇಬ್ಬರ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಫೈನಲ್ ವೇಳೆ ವೇದಿಕೆ ಬದಿಯಲ್ಲಿ ಮ್ಯಾಗ್ನಸ್-ಇಯಾನ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಮ್ಯಾಗ್ನಸ್, ‘ಅವರು(ಫಿಡೆ) ನಿರಾಕರಿಸಿದರೆ, ಬಿಟ್ಟು ಕೊಡುವವರೆಗೂ ನಾವು ಪಂದ್ಯ ಡ್ರಾ ಮಾಡೋಣ’ ಎಂದು ಹೇಳಿದ್ದಾರೆ. ಇಬ್ಬರೂ ಉದ್ದೇಶಪೂರ್ವಕವಾಗಿ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ಮೊದಲೇ ತಂತ್ರ ಹೂಡಿದ್ದರು ಎಂದು ಹಲವರು ಆರೋಪಿಸಿದ್ದಾರೆ. ಇನ್ನ, ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಹ್ಯಾನ್ಸ್ ನೀಮನ್ ಅವರು ಫಿಡೆ ನಿರ್ಧಾರವನ್ನು ಟೀಕಿಸಿದ್ದು, ವಿಶ್ವ ಚೆಸ್ ಎಂಬುದು ಈಗ ಜೋಕ್ ಆಗಿದೆ ಎಂದಿದ್ದಾರೆ.