ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್ ಕುಸ್ತಿ ಫೈನಲ್‌ನಿಂದ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ವಿಶ್ವ ಒಲಿಂಪಿಕ್ ಸಂಸ್ಥೆ ಹಾಗೂ ವಿಶ್ವ ಕುಸ್ತಿ ಫೆಡರೇಶನ್ ವಿರುದ್ಧ ಜಾಗತಿಕ ಕ್ರೀಡಾ ನ್ಯಾಯಾಲಯ(ಸಿಎಎಸ್)ಕ್ಕೆ ಮೇಲನ್ಮವಿ ಸಲ್ಲಿಸಿದ್ದ ಭಾರತದ ವಿನೇಶ್ ಫೋಗಟ್‌ಗೆ ಹಿನ್ನಡೆಯಾಗಿದೆ. ತಾವು ನ್ಯಾಯಯುತವಾಗಿ ಫೈನಲ್ ಪ್ರವೇಶಿಸಿದ್ದಕ್ಕೆ ತಮಗೆ ಬೆಳ್ಳಿ ಪದಕ ನೀಡಬೇಕು ಎಂದು ವಿನೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ಜಾಗತಿಕ ಕ್ರೀಡಾ ನ್ಯಾಯಾಲಯದ ತಾತ್ಕಾಲಿಕ ಪೀಠ ತಿರಸ್ಕರಿಸಿದೆ. ಹೀಗಾಗಿ ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದ ವಿನೇಶ್‌ಗೆ ಭಾರಿ ನಿರಾಸೆ ಉಂಟಾಗಿದೆ.
ಫೈನಲ್ ದಿನ ಬೆಳಗ್ಗೆ ತೂಕ ಪರೀಕ್ಷೆಯಲ್ಲಿ ವಿನೇಶ್ ಅನುತ್ತೀರ್ಣರಾಗಿದ್ದರು. 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಅವರ ದೇಹದ ತೂಕ 100 ಗ್ರಾಂ ಹೆಚ್ಚಿತ್ತು ಎನ್ನುವ ಕಾರಣಕ್ಕೆ ಅನರ್ಹಗೊಳಿಸಲಾಗಿತ್ತು. ಮೊದಲ ದಿನದ ಸ್ಪರ್ಧೆ ಬಳಿಕ ದೇಹದ ತೂಕ 2.7 ಕೆ.ಜಿ.ಗಳಷ್ಟು ಹೆಚ್ಚಾಗಿತ್ತು. ಇಡೀ ರಾತ್ರಿ ಹರಸಾಹಸ ಪಟ್ಟರೂ ವಿನೇಶ್ ನಿಗದಿತ ತೂಕ ಸಾಧಿಸಲು ಸಾಧ್ಯವಾಗಿರಲಿಲ್ಲ. ನಿಶಕ್ತಿಗೊಂಡಿದ್ದ ವಿನೇಶ್‌ರನ್ನು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು.
ಆ.7ರಂದು ಫೈನಲ್‌ನಿಂದ ಅನರ್ಹಗೊಂಡಿದ್ದ ವಿನೇಶ್ ಅದೇ ದಿನ ಮೇಲ್ಮನವಿ ಸಲ್ಲಿಸಿದ್ದರು. ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಈ ಪ್ರಕರಣಕ್ಕೆ ಭಾರತದಿಂದಲೂ ಹಿರಿಯ ವಕೀಲರನ್ನು ನೇಮಿಸಿತ್ತು. ವಿನೇಶ್‌ರ ಅರ್ಜಿ ಸ್ವೀಕರಿಸಿದ್ದ ಸಿಎಎಸ್, ಎರಡೂ ಕಡೆಗಳ ವಾದ ಆಲಸಿ ಒಲಿಂಪಿಕ್ಸ್ ಮುಗಿಯುವ ಮೊದಲು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಆ.13ರಂದು ತೀರ್ಪು ಹೊರಬೀಳಬೇಕಿತ್ತು. ಆದರೆ ಆ.16ಕ್ಕೆ ಮುಂದೂಡಿಕೆಯಾಗಿತ್ತು. ಆದರೆ ಬುಧವಾರ ರಾತ್ರಿ ಸಿಎಎಸ್ ತನ್ನ ತೀರ್ಪನ್ನು ಪ್ರಕಟಿಸಿದೆ. ಮೂಲಗಳ ಪ್ರಕಾರ, ವಿನೇಶ್ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ತಿಳಿದುಬಂದಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ 1 ಬೆಳ್ಳಿ, 5 ಕಂಚಿನ ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ 71ನೇ ಸ್ಥಾನ ಪಡೆದಿತ್ತು.
ಮುಂದಿರುವ ಆಯ್ಕೆಗಳನ್ನು ಪರಿಶೀಲಿಸುತ್ತೇವೆ: ಐಒಎ
ವಿನೇಶ್ ಫೋಗಟ್‌ರ ಅರ್ಜಿ ತಿರಸ್ಕಾರಗೊಂಡ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಭಾರತೀಯ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ, ತಮ್ಮ ಮುಂದಿರುವ ಕಾನೂನು ಆಯ್ಕೆಗಳನ್ನು ಪರಿಶೀಲಿಸಿ ಮುಂದಿನ ನಡೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ. ನ್ಯಾಯಯುತವಾಗಿ ಫೈನಲ್ ಪ್ರವೇಶಿಸಿದರೂ ಬೆಳ್ಳಿ ಪದಕ ಕೊಡಲು ನಿರಾಕರಿಸಿರುವುದು ಸರಿಯಲ್ಲ ಎಂದು ಪ್ರತಿಪಾದಿಸಿರುವ ಉಷಾ, ಈ ತೀರ್ಪಿನಿಂದ ತಮಗೆ ಆಘಾತವಾಗಿದೆ. ನಾವು ಈ ಹೋರಾಟದಲ್ಲಿ ವಿನೇಶ್ ಫೋಗಟ್‌ರ ಜೊತೆ ಗಟ್ಟಿಯಾಗಿ ನಿಲ್ಲಲಿದ್ದೇವೆ ಎಂದಿದ್ದಾರೆ.