ಚಾಂಪಿಯನ್ನರನ್ನು ಚೆಂಡಾಡಿದ ಕಿವೀಸ್‌!

| Published : Oct 06 2023, 12:00 AM IST / Updated: Oct 07 2023, 12:32 PM IST

newzeland
ಚಾಂಪಿಯನ್ನರನ್ನು ಚೆಂಡಾಡಿದ ಕಿವೀಸ್‌!
Share this Article
  • FB
  • TW
  • Linkdin
  • Email

ಸಾರಾಂಶ

ಕ್ರಿಕೆಟ್‌ ವಿಶ್ವಕಪ್‌ ಅನಿರೀಕ್ಷಿತ ಫಲಿತಾಂಶದೊಂದಿಗೆ ಶುರುವಾಗಿದೆ
ಅಹಮದಾಬಾದ್‌: 2023ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಅನಿರೀಕ್ಷಿತ ಫಲಿತಾಂಶದೊಂದಿಗೆ ಶುರುವಾಗಿದೆ. ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ 9 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸುವ ಮೂಲಕ, 2019ರ ವಿಶ್ವಕಪ್‌ ಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್‌ನ ನೆಟ್‌ ರನ್‌ರೇಟ್‌ಗೆ ಭಾರೀ ಪೆಟ್ಟು ನೀಡಿದೆ. ನ್ಯೂಜಿಲೆಂಡ್‌ನ ನೆಟ್‌ ರನ್‌ರೇಟ್‌ +2.149, ಇಂಗ್ಲೆಂಡ್‌ನ ನೆಟ್‌ ರನ್‌ರೇಟ್‌ -2.14 ಇದೆ. ವಿಲಿಯಮ್ಸನ್‌, ಸೌಥಿ, ಫರ್ಗ್ಯೂಸನ್‌, ಬ್ರೇಸ್‌ವೆಲ್‌ ಹೀಗೆ ಸಾಲು ಸಾಲು ತಾರಾ ಆಟಗಾರರಿಲ್ಲದೆ ಕಣಕ್ಕಿಳಿದರೂ ನ್ಯೂಜಿಲೆಂಡ್‌ಗೆ ಯಾರ ಅನುಪಸ್ಥಿತಿಯೂ ಕಾಡಲಿಲ್ಲ. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕಿವೀಸ್‌, ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟಿಂಗ್‌ ಪಡೆಯನ್ನು 50 ಓವರಲ್ಲಿ 9 ವಿಕೆಟ್‌ಗೆ 282 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಬಳಿಕ ಆರಂಭಿಕ ಆಘಾತ ಎದುರಾದರೂ, ಡೆವೊನ್‌ ಕಾನ್‌ವೇ ಹಾಗೂ ರಚಿನ್‌ ರವೀಂದ್ರ ಮುರಿಯದ 2ನೇ ವಿಕೆಟ್‌ಗೆ 273 ರನ್‌ ಜೊತೆಯಾಟವಾಡಿ, ತಂಡವನ್ನು ಇನ್ನೂ 13.4 ಓವರ್‌ ಬಾಕಿ ಇರುವಂತೆ ಗೆಲ್ಲಿಸಿದರು. ಕಾನ್‌ವೇ ವೃತ್ತಿಬದುಕಿನ ಶ್ರೇಷ್ಠ ಅಜೇಯ 152 ರನ್‌ ಸಿಡಿಸಿದರೆ, ಕಿವೀಸ್‌ ಪರ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಅತಿಕಿರಿಯ ಎನ್ನುವ ದಾಖಲೆ ಬರೆದ 23 ವರ್ಷದ ರಚಿನ್‌, 123 ರನ್‌ ಗಳಿಸಿ ಔಟಾಗದೆ ಉಳಿದರು. ಇಂಗ್ಲೆಂಡ್‌ನ ಎಲ್ಲಾ ಬೌಲರ್‌ಗಳೂ 6ಕ್ಕಿಂತ ಹೆಚ್ಚಿನ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದು, ಕಾನ್‌ವೇ-ರಚಿನ್‌ರ ಬ್ಯಾಟಿಂಗ್‌ ಎಷ್ಟು ಆಕ್ರಮಣಕಾರಿಯಾಗಿತ್ತು ಎನ್ನುವುದಕ್ಕೆ ಉದಾಹರಣೆ. ಇಂಗ್ಲೆಂಡ್‌ ಬ್ಯಾಟ್ ಮಾಡುವಾಗ ನ್ಯೂಜಿಲೆಂಡ್‌ ಫೀಲ್ಡರ್‌ಗಳು ಮೈದಾನ ತುಂಬಾ ಇದ್ದಾರೆ ಎನ್ನುವಂತೆ ಭಾಸವಾಗುತ್ತಿತ್ತು. ಆದರೆ ನ್ಯೂಜಿಲೆಂಡ್‌ ಬ್ಯಾಟ್‌ ಮಾಡುವಾಗ ಇಂಗ್ಲೆಂಡ್‌ ಫೀಲ್ಡರ್‌ಗಳು ಮಾಯವಾದಂತೆ ಕಂಡು ಬಂತು. ಕಾನ್‌ವೇ ಹಾಗೂ ರಚಿನ್‌ ಲೀಲಾಜಾಲವಾಗಿ, ಯಾವುದೇ ಅಡೆತಡೆಗಳಲ್ಲಿದೆ ಬೌಂಡರಿಗಳ ಮೇಲೆ ಬೌಂಡರಿ ಸಿಡಿಸಿದರು. ಕಾನ್‌ವೇ ಇನ್ನಿಂಗ್ಸಲ್ಲಿ 19 ಬೌಂಡರಿ, 3 ಸಿಕ್ಸರ್‌ಗಳಿದ್ದರೆ, ರಚಿನ್‌ರ ಇನ್ನಿಂಗ್ಸ್‌ 11 ಬೌಂಡರಿ, 5 ಸಿಕ್ಸರ್‌ಗಳಿಂದ ಕೂಡಿತ್ತು. ಕಿವೀಸ್‌ ಶಿಸ್ತುಬದ್ಧ ದಾಳಿ: ಇಂಗ್ಲೆಂಡ್‌ನ ಎಲ್ಲಾ 11 ಆಟಗಾರರು ಬ್ಯಾಟ್‌ ಮಾಡಬಲ್ಲರು ಎನ್ನುವುದು ತಿಳಿದಿದ್ದ ಕಾರಣ, ಕಿವೀಸ್‌ ಬೌಲರ್‌ಗಳು ಯಾವುದೇ ಹಂತದಲ್ಲೂ ತಮ್ಮ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಲಿಲ್ಲ. ಅಚ್ಚುಕಟ್ಟಾದ ಲೈನ್ ಅಂಡ್‌ ಲೆಂಥ್‌ಗಳನ್ನು ಬೌಲ್‌ ಮಾಡಿ, ಇಂಗ್ಲೆಂಡ್‌ ಸುಲಭದಲ್ಲಿ ರನ್‌ ಕದಿಯಲು ಬಿಡಲಿಲ್ಲ. ಪ್ರತಿ ರನ್‌ಗೆ ಹೆಚ್ಚಿನ ಪರಿಶ್ರಮ ವಹಿಸಬೇಕಾದ ಅನಿವಾರ್ಯತೆ ಸಿಲುಕಿದ ಇಂಗ್ಲೆಂಡ್‌ ಬ್ಯಾಟರ್‌ಗಳು ಪ್ರತಿ ವಿಕೆಟ್‌ ಬಿದ್ದಾಗಲೂ ಹೆಚ್ಚೆಚ್ಚು ಒತ್ತಡಕ್ಕೆ ಸಿಲುಕಿದರು. ಶತಕದ ನಿರೀಕ್ಷೆ ಮೂಡಿಸಿದ್ದ ರೂಟ್‌ 77 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. 34ನೇ ಓವರಲ್ಲಿ ನಾಯಕ ಬಟ್ಲರ್‌ ಔಟಾದಾಗ ತಂಡದ ಮೊತ್ತ, ಆ ಬಳಿಕ ಕೆಳ ಕ್ರಮಾಂಕದಿಂದ ದೊಡ್ಡ ಇನ್ನಿಂಗ್ಸ್‌ ಮೂಡಿಬರಲಿಲ್ಲ. ತಂಡದ ಎಲ್ಲಾ 11 ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಿದರೂ, 300 ರನ್‌ ತಲುಪಲು ಇಂಗ್ಲೆಂಡ್‌ಗೆ ಸಾಧ್ಯವಾಗಲಿಲ್ಲ. ಮ್ಯಾಟ್‌ ಹೆನ್ರಿ ಹಾಗೂ ಮಿಚೆಲ್‌ ಸ್ಯಾಂಟ್ನರ್‌ರ ಶಿಸ್ತುಬದ್ಧ ಬೌಲಿಂಗ್‌ ದಾಳಿ, ಇಂಗ್ಲೆಂಡ್‌ ಬ್ಯಾಟಿಂಗ್‌ ಪಡೆಯ ಉಸಿರುಗಟ್ಟಿಸಿತು. ಸ್ಕೋರ್‌: ಇಂಗ್ಲೆಂಡ್‌ 50 ಓವರಲ್ಲಿ 282/9 (ರೂಟ್‌ 77, ಬಟ್ಲರ್‌ 43, ಬೇರ್‌ಸ್ಟೋವ್‌ 33, ಹೆನ್ರಿ 3-48, ಸ್ಯಾಂಟ್ನರ್‌ 2-37), ನ್ಯೂಜಿಲೆಂಡ್‌ 36.2 ಓವರಲ್ಲಿ 283/1 (ಕಾನ್‌ವೇ 152*, ರಚಿನ್‌ 123*, ಕರ್ರನ್‌ 1-47) ಪಂದ್ಯಶ್ರೇಷ್ಠ: ರಚಿನ್‌ ರವೀಂದ್ರ. ಟರ್ನಿಂಗ್‌ ಪಾಯಿಂಟ್‌ ಕಿವೀಸ್‌ ದೊಡ್ಡ ಗುರಿ ಪಡೆಯದಿದ್ದರೂ, 2ನೇ ಓವರಲ್ಲೇ ವಿಲ್‌ ಯಂಗ್‌ ಔಟಾದಾಗ ತಂಡದ ಒತ್ತಡಕ್ಕೆ ಸಿಲುಕಿ ನಿಧಾನವಾಗಿ ಬ್ಯಾಟ್‌ ಮಾಡಬಹುದು ಎನಿಸಿತು. ಆದರೆ ಕಾನ್‌ವೇ ಹಾಗೂ ರಚಿನ್‌ ಆಕ್ರಮಣಕಾರಿ ಆಟವಾಡಿ ಮೊದಲ 20-25 ಓವರ್‌ಗಳಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಂಡಿದ್ದರಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಲು ಇಂಗ್ಲೆಂಡ್‌ಗೆ ಅವಕಾಶವೇ ಸಿಗದಂತಾಯಿತು. == ನ್ಯೂಜಿಲೆಂಡ್‌ ಮುಂದಿನ ಪಂದ್ಯ: ನೆದರ್‌ಲೆಂಡ್ಸ್‌ ವಿರುದ್ಧ ಅ.9ಕ್ಕೆ, ಹೈದರಾಬಾದ್‌ ಇಂಗ್ಲೆಂಡ್‌ ಮುಂದಿನ ಪಂದ್ಯ: ಬಾಂಗ್ಲಾದೇಶ ವಿರುದ್ಧ ಅ.10ಕ್ಕೆ, ಧರ್ಮಶಾಲಾ