ಸಾರಾಂಶ
ನವದೆಹಲಿ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿರುವ ಗೌತಮ್ ಗಂಭೀರ್ ಮುಂದೆ ಸಾಲು ಸಾಲು ಸವಾಲುಗಳಿವೆ. 2027ರ ವರೆಗೂ ಗಂಭೀರ್ ಕೋಚ್ ಆಗಿ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದು, ಈ ಅವಧಿಯಲ್ಲಿ ಭಾರತ ತಂಡ 2 ಬಾರಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್, ತಲಾ ಒಂದು ಟಿ20 ಹಾಗೂ ಏಕದಿನ ವಿಶ್ವಕಪ್‌ಗಳನ್ನು ಆಡಲಿದೆ.
ಇದೇ ತಿಂಗಳು 27ರಿಂದ ಶ್ರೀಲಂಕಾ ವಿರುದ್ಧದ ಏಕದಿನ, ಟಿ20 ಸರಣಿಗಳಿಂದ ಗಂಭೀರ್‌ರ ಯುಗ ಆರಂಭಗೊಳ್ಳಲಿದೆ. ಪ್ರಮುಖವಾಗಿ ಈ ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯು ಭಾರತ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲಿದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸಬಹುದು.
ಇನ್ನು 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿ ನಡೆಯಲಿದ್ದು, 2013ರ ಬಳಿಕ ಭಾರತ ಈ ಪ್ರಶಸ್ತಿ ಗೆದ್ದಿಲ್ಲ. 2025ರಲ್ಲಿ ಇಂಗ್ಲೆಂಡ್‌ನಲ್ಲಿ 5 ಟೆಸ್ಟ್ ಪಂದ್ಯಗಳ ಸರಣಿ, ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. 2025-27ರ ಅವಧಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಭಾರತ 2027ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಬಹುದು. ಇನ್ನು 2027ರ ಏಕದಿನ ವಿಶ್ವಕಪ್ ಗಂಭೀರ್‌ರ ಪಾಲಿಗೆ ಅತ್ಯಂತ ಮಹತ್ವದೆನಿಸಲಿದೆ.