ಮಹಾರಾಜ ಟ್ರೋಫಿ ಟಿ20 3ನೇ ಆವೃತ್ತಿ ಲೀಗ್‌ : ಉದ್ಘಾಟನಾ ಪಂದ್ಯದಲ್ಲೇ ಬೆಂಗಳೂರಿಗೆ 9 ವಿಕೆಟ್‌ ಜಯ

| Published : Aug 16 2024, 01:03 AM IST / Updated: Aug 16 2024, 04:15 AM IST

ಸಾರಾಂಶ

3ನೇ ಆವೃತ್ತಿ ಲೀಗ್‌ನಲ್ಲಿ ಭರ್ಜರಿ ಶುಭಾರಂಭ. ಗುಲ್ಬರ್ಗಾ ಕೇವಲ 116ಕ್ಕೆ ಆಲೌಟ್‌. 11.2 ಓವರಲ್ಲೇ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ. ಅಬ್ಬರಿಸಿದ ಚೇತನ್‌, ಮಯಾಂಕ್‌ ಅಗರ್‌ವಾಲ್‌.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ಭರ್ಜರಿ ಶುಭಾರಂಭ ಮಾಡಿದೆ. ಗುರುವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ತಂಡ, ಮಾಜಿ ಚಾಂಪಿಯನ್‌ ಗುಲ್ಬರ್ಗಾ ಮಿಸ್ಟಿಕ್ಸ್‌ ವಿರುದ್ಧ 9 ವಿಕೆಟ್‌ ಜಯಗಳಿಸಿತು.ಮೊದಲು ಬ್ಯಾಟ್‌ ಮಾಡಿದ ಗುಲ್ಬರ್ಗಾ 16.4 ಓವರ್‌ಗಳಲ್ಲಿ 116 ರನ್‌ಗೆ ಆಲೌಟಾಯಿತು. 

ನಾಯಕ ದೇವದತ್‌ ಪಡಿಕ್ಕಲ್‌(20) ಹೊರತುಪಡಿಸಿ ಬೇರೆ ಯಾರೂ 20ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಆರಂಭಿಕ ಆಟಗಾರ ಲುವ್‌ನಿತ್‌ ಸಿಸೋಡಿಯಾ 14ಕ್ಕೆ ವಿಕೆಟ್‌ ಒಪ್ಪಿಸಿದರೆ, ಪ್ರವೀಣ್‌ ದುಬೆ 19, ಯಶೋವರ್ಧನ್‌ 11, ಶರತ್‌ ಬಿ.ಆರ್. 13 ಹಾಗೂ ಪೃಥ್ವಿರಾಜ್‌ 10 ರನ್‌ ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು. ಬೆಂಗಳೂರಿನ ಆದಿತ್ಯ ಗೋಯಲ್‌ 3 ವಿಕೆಟ್‌ ಕಬಳಿಸಿದರೆ, ಲಾವಿಶ್‌ ಕೌಶಲ್‌, ನವೀನ್‌ ಎಂ.ಜಿ. ಹಾಗೂ ಮೊಹ್ಸಿನ್‌ ಖಾನ್‌ ತಲಾ 2 ವಿಕೆಟ್‌ ಪಡೆದರು.

ಸುಲಭ ಗುರಿಯನ್ನು ಬೆಂಗಳೂರು ತಂಡ ಕೇವಲ 11.2 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. ಈ ಬಾರಿ ಹರಾಜಿನ ದುಬಾರಿ ಆಟ ಎನಿಸಿಕೊಂಡಿದ್ದ ಎಲ್‌.ಆರ್‌. ಚೇತನ್‌ ಕೇವಲ 34 ಎಸೆತಗಳಲ್ಲೇ 53 ರನ್‌ ಸಿಡಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ನಾಯಕ ಮಯಾಂಕ್‌ ಅಗರ್‌ವಾಲ್‌ 29 ಎಸೆತಗಳಲ್ಲಿ ಔಟಾಗದೆ 47 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು. ಸ್ಕೋರ್‌: ಗುಲ್ಬರ್ಗಾ 16.4 ಓವರ್‌ಗಳಲ್ಲಿ 116/10 (ದೇವದತ್‌ 20, ಪ್ರವೀಣ್‌ 19, ಆದಿತ್ಯ 3-43, ನವೀನ್‌ 2-8), ಬೆಂಗಳೂರು 11.2 ಓವರ್‌ಗಳಲ್ಲಿ 117/1 (ಚೇತನ್‌ 53, ಮಯಾಂಕ್‌ 47*, ವೈಶಾಕ್‌ 1-44)

ಪಂದ್ಯಶ್ರೇಷ್ಠ: ನವೀನ್‌ ಎಂ.ಜಿ.