ಸಾರಾಂಶ
ಪ್ಯಾರಿಸ್: ಈ ಬಾರಿ ಒಲಿಂಪಿಕ್ಸ್‌ನ ಮೊದಲ ಪದಕ ಕಜಕಸ್ತಾನದ ಪಾಲಾಯಿತು. ಶನಿವಾರ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಕಜಕಸ್ತಾನದ ಅಲೆಕ್ಸಾಂಡ್ರಾ ಲೆ ಹಾಗೂ ಇಸ್ಲಾಂ ಸತ್ಪಯೆವ್ ಕಂಚು ತಮ್ಮದಾಗಿಸಿಕೊಂಡರು. ಇನ್ನು, ಚೀನಾದ ಕೂಟದ ಮೊದಲ ಚಿನ್ನ, ದ.ಕೊರಿಯಾ ಮೊದಲ ಬೆಳ್ಳಿ ಪದಕ ಜಯಿಸಿತು.ಈ ಬಾರಿಯೂ ಚೀನಾ ಹಾಗೂ ಅಮೆರಿಕದ ಅಥ್ಲೀಟ್‌ಗಳು ಪದಕ ಗಳಿಕೆಯಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಈ ಎರಡೂ ದೇಶಗಳ ಕ್ರೀಡಾಪಟುಗಳು ಮೊದಲ ದಿನವೇ ಪದಕ ಸಾಧನೆ ಮಾಡಿದ್ದಾರೆ.
ದ.ಕೊರಿಯಾ ಅಥ್ಲೀಟ್ಸನ್ನು ಉತ್ತರ ಕೊರಿಯಾ ಎಂದ ಆಯೋಜಕರು!
ಪ್ಯಾರಿಸ್: ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ದಕ್ಷಿಣ ಕೊರಿಯಾ ಸ್ಪರ್ಧಿಗಳನ್ನು ಉತ್ತರ ಕೊರಿಯಾ ಎಂದು ಸಂಬೋಧಿಸಿದಕ್ಕಾಗಿ ಕ್ರೀಡಾಕೂಟದ ಆಯೋಜಕರು ಬೇಷರತ್ ಕ್ಷಮೆಯಾಚಿಸಿದ್ದಾರೆ.ಪಥ ಸಂಚಲನದ ವೇಳೆ ದ.ಕೊರಿಯಾ ಅಥ್ಲೀಟ್‌ಗಳಿದ್ದ ಬೋಟ್ ಆಗಮಿಸಿದಾಗ ಆಯೋಜಕರು ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಎಂದು ಕರೆದರು. ಆದರೆ ಇದು ಉತ್ತರ ಕೊರಿಯಾದ ಹೆಸರು. ದಕ್ಷಿಣ ಕೊರಿಯಾವನ್ನು ರಿಪಬ್ಲಿಕ್ ಆಫ್ ಕೊರಿಯಾ ಎಂದು ಕರೆಯಲಾಗುತ್ತದೆ. ವಿವಾದದ ಬಳಿಕ ಆಯೋಜಕರು ದ.ಕೊರಿಯಾದ ಕ್ಷಮೆ ಕೋರಿದ್ದಾರೆ.
ಆಗಸದಲ್ಲಿ ಹಾರಾಡಲಿದೆ ಒಲಿಂಪಿಕ್ಸ್ ಜ್ಯೋತಿಪುಂಜ
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಒಲಿಂಪಿಕ್ಸ್ ಜ್ಯೋತಿಪುಂಜವನ್ನು ಬೆಳಗಿಸಲಾಗಿದ್ದು, ಕ್ರೀಡಾಕೂಟ ಮುಗಿಯುವ ವರೆಗೂ ಪ್ಯಾರಿಸ್ ಆಗಸದಲ್ಲಿ ಹಾರಾಡಲಿದೆ. ಇದೇ ಮೊದಲ ಬಾರಿಗೆ ಆಯೋಜಕರು ಪಳೆಯುಳಿಕೆಯ ಇಂಧನ ಬಳಸದೆ ಜ್ಯೋತಿಪುಂಜ ಸಿದ್ಧಪಡಿಸಿದ್ದಾರೆ. ಜ್ಯೋತಿಪುಂಜಕ್ಕೆ 40 ಎಲ್‌ಇಡಿ ಸ್ಪಾಟ್‌ಲೈಟ್‌ಗಳನ್ನು ಬಳಸಲಾಗಿದ್ದು, ಬೃಹತ್ ಹೈಡ್ರೋಜನ್ ಬಲೂನ್‌ಗೆ ಕಟ್ಟಿ ಆಗಸಕ್ಕೆ ಹಾರಿಸಿ ಬಿಡಲಾಗಿದೆ. ಒಲಿಂಪಿಕ್ಸ್ ಮುಗಿಯುವ ವರೆಗೂ ನಿತ್ಯ 197 ಅಡಿ ಎತ್ತರದಲ್ಲಿ ಸಂಜೆಯಿಂದ ಮಧ್ಯರಾತ್ರಿ 2ರ ವರೆಗೂ ಬಲೂನ್ ಹಾರಾಡಲಿದೆ.