ಟಿ 20 ಸರಣಿ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಕ್ಲೀನ್‌ಸ್ವೀಪ್‌ ಗುರಿ - ಮುಖಭಂಗದಿಂದ ಪಾರಾಗಲು ಲಂಕಾ ಕಾತರ

| Published : Jul 30 2024, 12:31 AM IST / Updated: Jul 30 2024, 04:43 AM IST

ಸಾರಾಂಶ

ಇಂದು ಉಭಯ ತಂಡಗಳ ನಡುವೆ 3ನೇ ಟಿ20. ಆತಿಥೇಯ ಶ್ರೀಲಂಕಾ ತಂಡ ಕ್ಲೀನ್‌ಸ್ವೀಪ್‌ ಮುಖಭಂಗದಿಂದ ಪಾರಾಗಲು ಕಾತರಿಸುತ್ತಿದೆ.

ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಕ್ಲೀನ್‌ಸ್ವೀಪ್‌ ಸಾಧಿಸಲು ಎದುರು ನೋಡುತ್ತಿರುವ ಹಾಲಿ ವಿಶ್ವ ಚಾಂಪಿಯನ್‌ ಭಾರತ ತಂಡ ಮಂಗಳವಾರ 3ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಲಂಕಾ ತಂಡ ಕ್ಲೀನ್‌ಸ್ವೀಪ್‌ ಮುಖಭಂಗದಿಂದ ಪಾರಾಗಲು ಕಾತರಿಸುತ್ತಿದೆ.

ಆರಂಭಿಕ 2 ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿದ್ದ ಭಾರತ, ಕ್ರಮವಾಗಿ 43 ರನ್‌ ಹಾಗೂ 7 ವಿಕೆಟ್‌ ಗೆಲುವು ಸಾಧಿಸಿತ್ತು. ಹೊಸ ನಾಯಕ ಸೂರ್ಯಕುಮಾರ್‌ ಯಾದವ್‌ ಅಬ್ಬರಿಸುತ್ತಿದ್ದು, ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌ ಕೂಡಾ ಅಮೋಘ ಆಟವಾಡುತ್ತಿದ್ದಾರೆ. ಗಾಯಗೊಂಡ ಕಾರಣ 2ನೇ ಪಂದ್ಯ ತಪ್ಪಿಸಿಕೊಂಡಿದ್ದ ಗಿಲ್‌ 3ನೇ ಪಂದ್ಯದಲ್ಲಿ ಆಡುತ್ತಾರೊ ಇಲ್ಲವೊ ಎಂಬುದು ಇನ್ನಷ್ಟೇ ಖಚಿತಗೊಳ್ಳಬೇಕಿದೆ. ಸಂಜು ಸ್ಯಾಮ್ಸನ್‌ ಸಿಕ್ಕ ಅವಕಾಶ ಬಾಚಿಕೊಳ್ಳುವ ಅಗತ್ಯವಿದೆ.ಮತ್ತೊಂದೆಡೆ ಲಂಕಾ ತಂಡ ತವರಿನಲ್ಲೇ ನೀರಸ ಪ್ರದರ್ಶನ ತೋರುತ್ತಿದೆ. ತಂಡದ ಬೌಲಿಂಗ್‌ ವಿಭಾಗ ದುರ್ಬಲವಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳೂ ಕೈಕೊಡುತ್ತಿದ್ದಾರೆ. ಸುಧಾರಿತ ಪ್ರದರ್ಶನ ನೀಡಿದರಷ್ಟೇ ಗೆಲುವು ಸಿಗಲಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ, ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ನೆಟ್ವರ್ಕ್‌, ಸೋನಿ ಲೈವ್‌-

ಭಾರತದಲ್ಲಿ 2025ರ ಏಷ್ಯಾಕಪ್‌

ಕೌಲಾ ಲಂಪುರ(ಮಲೇಷ್ಯಾ): 2025ರ ಪುರುಷರ ಏಷ್ಯಾಕಪ್‌ಗೆ ಭಾರತ ಆತಿಥ್ಯ ವಹಿಸಲಿದೆ. ಟೂರ್ನಿ ಟಿ20 ಮಾದರಿಯಲ್ಲಿ ನಡೆಯಲಿದೆ ಎಂದು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಸೋಮವಾರ ಅಧಿಕೃತವಾಗಿಟ ಘೋಷಿಸಿದೆ. ಅಲ್ಲದೆ, ಏಕದಿನ ಮಾದರಿಯಲ್ಲಿ ನಡೆಯಲಿರುವ 2027ರ ಏಷ್ಯಾಕಪ್‌ ಬಾಂಗ್ಲಾದೇಶದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದೆ.ಭಾರತ ಈ ಮೊದಲು 1990/91ರಲ್ಲಿ ಮೊದಲ ಬಾರಿ ಏಷ್ಯಾಕಪ್‌ ಆಯೋಜಿಸಿತ್ತು. 2023ರ ಏಷ್ಯಾಕಪ್‌ ಆತಿಥ್ಯ ಹಕ್ಕು ಪಾಕಿಸ್ತಾನ ಪಡೆದಿತ್ತಾದರೂ, ಭಾರತ ತಂಡ ಪಾಕ್‌ಗೆ ತೆರಳದ ಕಾರಣ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಟೂರ್ನಿಯಲ್ಲಿ ಭಾರತ ದಾಖಲೆಯ 7 ಬಾರಿ ಚಾಂಪಿಯನ್‌ ಆಗಿದೆ. ಶ್ರೀಲಂಕಾ 5 ಬಾರಿ, ಪಾಕಿಸ್ತಾನ 2 ಬಾರಿ ಪ್ರಶಸ್ತಿ ಗೆದ್ದಿದೆ.