ಸಾರಾಂಶ
ಇಸ್ಲಾಮಾಬಾದ್: ಫೆ.2, 3ರಂದು ನಡೆಯಲಿರುವ ಡೇವಿಸ್ ಕಪ್ ವಿಶ್ವ ಗುಂಪು 1 ಪ್ಲೇ ಆಫ್ ಪಂದ್ಯದಲ್ಲಿ ಭಾರತ ತಂಡದ ಆಡದ ನಾಯಕರಾಗಿ ಕೋಚ್ ಝೀಶಾನ್ ಅಲಿ ಕಾರ್ಯನಿರ್ವಹಿಸಲಿದ್ದಾರೆ. ತಂಡದ ಕಾಯಂ ಆಡದ ನಾಯಕ ರೋಹಿತ್ ರಾಜ್‌ಪಾಲ್ ವೈಯಕ್ತಿಕ ಕಾರಣಗಳಿಂದ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗಿಲ್ಲ, ಆದ್ದರಿಂದ ಝೀಶಾನ್ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಅಖಿಲ ಭಾರತ ಲಾನ್ ಟೆನಿಸ್ ಸಂಸ್ಥೆ (ಎಐಟಿಎ) ಕಾರ್ಯದರ್ಶಿ ಅನಿಲ್ ಧೂಪರ್ ತಿಳಿಸಿದ್ದಾರೆ. ಈ ಮುಂಚೆ ತಂಡದಲ್ಲಿದ್ದ ಸುಮಿತ್ ನಗಾಲ್ ಮತ್ತು ಶಶಿಕುಮಾರ್ ಮುಕುಂದ್ ಕೂಡಾ ತಂಡದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ರಾಮ್ಕುಮಾರ್ ರಾಮನಾಥನ್ ಭಾರತದ ಭಾರತದ ಸವಾಲನ್ನು ಮುನ್ನಡೆಸುತ್ತಿದ್ದಾರೆ. ಡಬಲ್ಸ್ ಅಟಗಾರ ಯೂಕಿ ಬಾಬ್ರಿ ಸಿಂಗಲ್ಸ್‌ನಲ್ಲೂ ಆಡುವ ಸಾಧ್ಯತೆಯಿದೆ. ಎನ್ ಶ್ರೀರಾಮ್ ಬಾಲಾಜಿ, ನಿಕಿ ಪೂನಚ್ಚ ಮತ್ತು ಸಾಕೇತ್ ಮೈನೇನಿ ತಂಡದಲ್ಲಿದ್ದು, ದಿಗ್ವಿಜಯ್ ಪ್ರತಾಪ್ ಸಿಂಗ್ ಮೀಸಲು ಆಟಗಾರಾಗಿದ್ದಾರೆ. ಅನುಭವಿ ಆಟಗಾರ, 43 ವರ್ಷದ ಐಸಾಮ್ ಉಲ್ ಹಕ್ ಪಾಕಿಸ್ತಾನ ಡೇವಿಸ್ ಕಪ್ ತಂಡದ ನಾಯಕರಾಗಿದ್ದು, ಆಖೀಲ್ ಖಾನ್, ಮುಜಮಿಲ್ ಮುರ್ತಾಜಾ ತಂಡದಲ್ಲಿದ್ದಾರೆ. 60 ವರ್ಷಗಳ ಹಿಂದೆ, ಅಂದರೆ 1964ರಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಭಾರತ ತಂಡ 4-0ಯಿಂದ ಜಯ ಸಾಧಿಸಿತ್ತು.