ಇಂದಿನಿಂದ ಭಾರತ vs ಇಂಗ್ಲೆಂಡ್‌ ಏಕದಿನ: ಚಾಂಪಿಯನ್ಸ್‌ ಟ್ರೋಫಿಗೆ ಉಭಯ ತಂಡಗಳ ಸಿದ್ಧತೆ

| N/A | Published : Feb 06 2025, 12:19 AM IST / Updated: Feb 06 2025, 04:12 AM IST

ಸಾರಾಂಶ

ಮೂರು ಪಂದ್ಯದ ಸರಣಿ: ಟೀಂ ಇಂಡಿಯಾಗೆ ಅಗ್ನಿಪರೀಕ್ಷೆ. ಆಟಗಾರರ ಲಯ, ಫಿಟ್ನೆಸ್‌ ತಲೆಬಿಸಿ. ವಿರಾಟ್‌, ರೋಹಿತ್ ಮೇಲೆ ಹೆಚ್ಚಿನ ನಿರೀಕ್ಷೆ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಾಹುಲ್-ಪಂತ್‌ ಪೈಪೋಟಿ. ಚಕ್ರವರ್ತಿಗೆ ಅವಕಾಶ ಸಾಧ್ಯತೆ.

ನಾಗ್ಪುರ: 7 ವರ್ಷಗಳ ಬಳಿಕ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಇನ್ನು 2 ವಾರ ಮಾತ್ರ ಬಾಕಿಯಿದೆ. ಈ ಹೊತ್ತಿನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಏಕದಿನ ಸರಣಿ ಎರಡೂ ತಂಡಗಳಿಗೆ ಮಹತ್ವದ್ದಾಗಿದ್ದರೂ, ಭಾರತದ ಪಾಲಿಗಂತೂ ಅಗ್ನಿಪರೀಕ್ಷೆ ಇದ್ದಂತೆ. ಚಾಂಪಿಯನ್ಸ್‌ ಟ್ರೋಫಿಗೆ ಅಂತಿಮ ಸಿದ್ಧತೆ ಎಂಬಂತಿರುವ 3 ಪಂದ್ಯಗಳ ಸರಣಿ ಗುರುವಾರ ಆರಂಭಗೊಳ್ಳಲಿದ್ದು, ಮೊದಲ ಪಂದ್ಯಕ್ಕೆ ನಾಗ್ಪುರ ಆತಿಥ್ಯ ವಹಿಸಲಿದೆ.ಇಂಗ್ಲೆಂಡ್ ಟಿ20 ಸರಣಿಯಲ್ಲಿ 4-1ರಿಂದ ಗೆದ್ದಿರುವ ಭಾರತ, ಏಕದಿನ ಸರಣಿಯನ್ನೂ ಕೈವಶಪಡಿಸಿಕೊಳ್ಳುವ ಕಾತರದಲ್ಲಿದೆ. ಆದರೆ ಸರಣಿ ಜಯ ಜೊತೆಗೆ ಆಟಗಾರರ ಕಮ್‌ಬ್ಯಾಕ್‌, ಲಯ, ಫಿಟ್ನೆಸ್‌ ಸಾಬೀತು ಕೂಡಾ ತಂಡದ ಮುಂದಿರುವ ಸವಾಲು.

ಮಿಂಚ್ತಾರಾ ವಿರಾಟ್, ರೋಹಿತ್‌?: ಟೆಸ್ಟ್‌ನಲ್ಲಿ ಕಳಪೆ ಆಟವಾಡಿ ಟೀಕೆಗೆ ಗುರಿಯಾಗಿರುವ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಈಗ ಏಕದಿನ ಕ್ರಿಕೆಟ್‌ಗೆ ಕಮ್‌ಬ್ಯಾಕ್ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಇವರಿಬ್ಬರೂ ರಣಜಿ ಕ್ರಿಕೆಟ್‌ಗೆ ಮರಳಿದ್ದರೂ, ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು. ತಂಡ ಇವರ ಮೇಲೇ ಹೆಚ್ಚಿನ ಭರವಸೆ ಇಟ್ಟುಕೊಂಡಿರುವ ಕಾರಣ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಲಯಕ್ಕೆ ಮರಳಬೇಕಾದ ಒತ್ತಡದಲ್ಲಿದ್ದಾರೆ.

ರೋಹಿತ್‌ ಜೊತೆ ಶುಭ್‌ಮನ್‌ ಗಿಲ್‌ ಆರಂಭಿಕನಾಗಿ ಆಡುವ ನಿರೀಕ್ಷೆಯಿದ್ದು, ನಂತರದ ಕ್ರಮಾಂಕದಲ್ಲಿ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಆಡಬಹುದು. ಇನ್ನು, ಆಲ್ರೌಂಡರ್‌ ಸ್ಥಾನಕ್ಕೆ ಹಾರ್ದಿಕ್‌ ಪಾಂಡ್ಯ ಆಯ್ಕೆಯಾಗುವುದು ಬಹುತೇಕ ಖಚಿತ.

ರಾಹುಲ್ ಅಥವಾ ರಿಷಭ್‌?: ತಂಡದಲ್ಲಿ ಕೆಲ ಆಯ್ಕೆ ಗೊಂದಲಗಳೂ ಇವೆ. 5ನೇ ಕ್ರಮಾಂಕದಲ್ಲಿ ಆಡಲಿರುವ ವಿಕೆಟ್ ಕೀಪರ್‌ ಸ್ಥಾನಕ್ಕೆ ಕನ್ನಡಿಗ ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ ನಡುವೆ ಪೈಪೋಟಿಯಿದೆ. ಕಳೆದ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿ, ಮಿಂಚಿದ್ದ ರಾಹುಲ್‌ಗೆ ಆಯ್ಕೆ ಸಮಿತಿ ಮಣೆ ಹಾಕುವ ಸಾಧ್ಯತೆಯಿದೆ.ಇನ್ನು, ವೇಗಿ ಮೊಹಮದ್‌ ಶಮಿ ಹಾಗೂ ಕುಲ್ದೀಪ್‌ ಯಾದವ್ ಏಕದಿನಕ್ಕೆ ಮರಳಲು ಸಜ್ಜಾಗಿದ್ದಾರೆ. ಇವರಿಬ್ಬರೂ ಚಾಂಪಿಯನ್ಸ್‌ ಟ್ರೋಫಿಯಲ್ಲಿ ತಂಡದ ಪ್ರಮುಖ ಆಟಗಾರರಾಗಿದ್ದು, ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ವರುಣ್‌ಗೆ ಚಾನ್ಸ್‌?: ಟಿ20 ಸರಣಿಯಲ್ಲಿ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಕಾಡಿದ್ದ ಸ್ಪಿನ್ನರ್ ವರುಣ್‌ ಚಕ್ರವರ್ತಿಯನ್ನು ಚಾಂಪಿಯನ್ಸ್‌ ಟ್ರೋಫಿಯಲ್ಲೂ ಆಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಹೀಗಾಗಿ ಅವರು ಏಕದಿನಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚು. ಇನ್ನು, ಸ್ಪಿನ್ ಆಲ್ರೌಂಡರ್‌ ಸ್ಥಾನಕ್ಕೆ ರವೀಂದ್ರ ಜಡೇಜಾ, ಆಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌ ನಡುವೆ ಪೈಪೋಟಿಯಿದೆ. ಬೂಮ್ರಾ ಅನುಪಸ್ಥಿತಿಯಲ್ಲಿ ಅರ್ಶ್‌ದೀಪ್‌ ಸಿಂಗ್‌ ಮೇಲೆ ಹೆಚ್ಚಿನ ಭರವಸೆಯಿದೆ.ರೂಟ್‌ ಕಮ್‌ಬ್ಯಾಕ್‌: ಮೊದಲ ಏಕದಿನ ಪಂದ್ಯಕ್ಕೆ ಜೋಸ್ ಬಟ್ಲರ್‌ ನಾಯಕತ್ವದ ಇಂಗ್ಲೆಂಡ್‌ ಈಗಾಗಲೇ ಆಡುವ 11ರ ಬಳಗವನ್ನು ಪ್ರಕಟಿಸಿದೆ. ಹಿರಿಯ ಆಟಗಾರ ಜೋ ರೂಟ್‌ 2023ರ ಬಳಿಕ ಮತ್ತೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ಕೊನೆ ಟಿ20 ಪಂದ್ಯ ಆಡಿದ ಬಹುತೇಕ ಆಟಗಾರರನ್ನೇ ತಂಡದಲ್ಲಿ ಉಳಿಸಲಾಗಿದೆ.

ಆಟಗಾರರ ಪಟ್ಟಿ: ಭಾರತ(ಸಂಭವನೀಯ): ರೋಹಿತ್‌(ನಾಯಕ), ಗಿಲ್, ಕೊಹ್ಲಿ, ಶ್ರೇಯಸ್‌, ರಾಹುಲ್‌/ಪಂತ್‌, ಹಾರ್ದಿಕ್‌, ಜಡೇಜಾ/ಅಕ್ಷರ್‌, ಕುಲ್ದೀಪ್‌, ಅರ್ಶ್‌ದೀಪ್‌, ಶಮಿ, ವರುಣ್‌.ಇಂಗ್ಲೆಂಡ್‌(ಆಡುವ 11): ಬೆನ್‌ ಡಕೆಟ್‌, ಫಿಲ್‌ ಸಾಲ್ಟ್‌, ರೂಟ್‌, ಬ್ರೂಕ್‌, ಬಟ್ಲರ್‌(ನಾಯಕ), ಲಿವಿಂಗ್‌ಸ್ಟೋನ್, ಬೆಥೆಲ್‌, ಕಾರ್ಸ್‌, ಆರ್ಚರ್‌, ರಶೀದ್‌, ಸಾಕಿಬ್‌.

ಒಟ್ಟು ಮುಖಾಮುಖಿ: 107ಭಾರತ: 58ಇಂಗ್ಲೆಂಡ್‌: 44ಟೈ: 02ಫಲಿತಾಂಶವಿಲ್ಲ: 03

ಪಿಚ್‌ ರಿಪೋರ್ಟ್‌: ನಾಗ್ಪುರ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಉದಾಹರಣೆಯಿದೆ. ರಾತ್ರಿ ವೇಳೆ ಮಂಜು ಬೀಳುವ ಕಾರಣ ಟಾಸ್‌ ಗೆದ್ದ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮಂಜು ಇಲ್ಲದಿದ್ದರೆ ಪಂದ್ಯ ಸಾಗಿದಂತೆ ಪಿಚ್‌ ನಿಧಾನಗತಿ ವರ್ತಿಸಲಿದ್ದು, ಬ್ಯಾಟಿಂಗ್‌ ಕಷ್ಟವಾಗಲೂಬಹುದು. ಹೀಗಾಗಿ ಟಾಸ್‌ ನಿರ್ಣಾಯಕ.

ಭಾರತದಲ್ಲಿ 1984ರಿಂದ ಸರಣಿ ಗೆದ್ದಿಲ್ಲ ಇಂಗ್ಲೆಂಡ್‌

ಇಂಗ್ಲೆಂಡ್‌ ತಂಡ ಭಾರತದಲ್ಲಿ 41 ವರ್ಷ ಬಳಿಕ ಏಕದಿನ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್‌ ತಂಡ 1984-85ರಲ್ಲಿ ಭಾರತದಲ್ಲಿ ನಡೆದ ಸರಣಿಯಲ್ಲಿ 4-1 ಗೆಲುವು ಸಾಧಿಸಿತ್ತು. ಆ ಬಳಿಕ ಒಮ್ಮೆಯೂ ಸರಣಿ ಗೆದ್ದಿಲ್ಲ. ಕೊನೆ ಬಾರಿ 2020-21ರಲ್ಲಿ ಉಭಯ ತಂಡಗಳ ನಡುವೆ ಭಾರತದಲ್ಲಿ ಸರಣಿ ನಡೆದಿತ್ತು. ಭಾರತ 2-1 ಜಯಗಳಿಸಿತ್ತು.

11ನೇ ಸರಣಿ: ಇದು 2 ತಂಡಗಳ ನಡುವೆ ಭಾರತದಲ್ಲಿ ನಡೆಯಲಿರುವ 11ನೇ ಸರಣಿ. ಈ ವರೆಗೂ ಭಾರತ 7ರಲ್ಲಿ, ಇಂಗ್ಲೆಂಡ್‌ 1ರಲ್ಲಿ ಜಯಗಳಿಸಿದೆ. 2 ಸರಣಿ ಡ್ರಾಗೊಂಡಿವೆ.