ಕೂಚ್‌ ಬಿಹಾರ್‌ ಟ್ರೋಫಿ: ಇಂದಿನಿಂದ ಕರ್ನಾಟಕ-ಮುಂಬೈ ಫೈನಲ್‌

| Published : Jan 12 2024, 01:46 AM IST

ಸಾರಾಂಶ

36 ತಂಡಗಳಿದ್ದ ಕೂಚ್‌ ಬಿಹಾರ್‌ ಟೂರ್ನಿಯಲ್ಲಿ ಕರ್ನಾಟಕ ಗುಂಪು ಹಂತದಲ್ಲಿ ಎಲೈಟ್‌ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿತ್ತು. ಶುಕ್ರವಾರ ಮುಂಬೈ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೆಣಸಲಿದೆ. ಗುಂಪಿನ ಇತರ 5 ತಂಡಗಳ ವಿರುದ್ಧ ಆಡಿದ್ದ ಕರ್ನಾಟಕ 4ರಲ್ಲಿ ಗೆದ್ದು, ಕ್ವಾರ್ಟರ್‌ಗೇರಿತ್ತು

ಶಿವಮೊಗ್ಗ: ವೃತ್ತಿಪರ ಕ್ರಿಕೆಟಿಗರಾಗಿ ಬೆಳೆಯಲು ಯುವ, ಪ್ರತಿಭಾವಂತರ ಪಾಲಿನ ಮೊದಲ ಹೆಜ್ಜೆ ಎನಿಸಿಕೊಂಡಿರುವ ಕೂಚ್‌ ಬಿಹಾರ್‌ ರಾಷ್ಟ್ರೀಯ ಅಂಡರ್‌-19 ಟೂರ್ನಿಯ ಈ ಆವೃತ್ತಿಯ ಫೈನಲ್‌ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ಪ್ರಶಸ್ತಿಗಾಗಿ ಕರ್ನಾಟಕ ಹಾಗೂ ಮುಂಬೈ ತಂಡಗಳು ಸೆಣಸಾಡಲಿವೆ. ಪಂದ್ಯಕ್ಕೆ ಶಿವಮೊಗ್ಗದ ಕೆಎಸ್‌ಸಿಎ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.36 ತಂಡಗಳಿದ್ದ ಟೂರ್ನಿಯಲ್ಲಿ ಕರ್ನಾಟಕ ಗುಂಪು ಹಂತದಲ್ಲಿ ಎಲೈಟ್‌ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿತ್ತು. ಗುಂಪಿನ ಇತರ 5 ತಂಡಗಳ ವಿರುದ್ಧ ಆಡಿದ್ದ ಕರ್ನಾಟಕ 4ರಲ್ಲಿ ಗೆದ್ದು, ಕ್ವಾರ್ಟರ್‌ಗೇರಿತ್ತು. ಕ್ವಾರ್ಟರ್‌ ಹಾಗೂ ಸೆಮೀಸ್‌ನಲ್ಲಿ ಕ್ರಮವಾಗಿ ರಾಜ್ಯ ತಂಡ ಮಧ್ಯಪ್ರದೇಶ, ತಮಿಳುನಾಡನ್ನು ಸೋಲಿಸಿದೆ. ಅತ್ತ ಮುಂಬೈ ಉತ್ತರ ಪ್ರದೇಶವನ್ನು ಸೋಲಿಸಿ ಫೈನಲ್‌ಗೇರಿದೆ. ಟೂರ್ನಿಯಲ್ಲಿ ಕರ್ನಾಟಕದ ಪರ ಕಾರ್ತಿಕೇಯ ಕೆ.ಪಿ ಐದು ಪಂದ್ಯಗಳನ್ನಾಡಿದ್ದು, 387ರನ್‌ ಗಳಿಸಿದ್ದಾರೆ ಮತ್ತು ಪ್ರಕರ್‌ ಚತಿರ್ವೇದಿ 7 ಪಂದ್ಯವಾಡಿ 387ರನ್‌ ಗಳಿಸಿದ್ದು, ರಾಜ್ಯದ ಬ್ಯಾಟಿಂಗ್‌ನ ಆಧಾರಸ್ಥಂಭವಾಗಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಮಿಂಚುತ್ತಿರುವ ಧೀರಜ್‌ ಗೌಡ 7 ಪಂದ್ಯಗಳಲ್ಲಿ 32 ವಿಕೆಟ್‌ ಕಿತ್ತಿದ್ದು, ಹಾರ್ದಿಕ್‌ ರಾಜ್‌ 24, ಸಮರ್ಥ ಎನ್‌ 23 ವಿಕೆಟ್‌ ಪಡೆದು ಮಿಂಚುತ್ತಿದ್ದಾರೆ. ಪಂದ್ಯ: ಬೆಳಗ್ಗೆ 9.30ಕ್ಕೆ