2 ಬಾರಿ ಚಾಂಪಿಯನ್‌ ವಿಂಡೀಸ್‌ನ ಹೊರದಬ್ಬಿ ದ.ಆಫ್ರಿಕಾ ಸೆಮೀಸ್‌ಗೆ

| Published : Jun 25 2024, 12:36 AM IST / Updated: Jun 25 2024, 04:13 AM IST

ಸಾರಾಂಶ

ಟಿ20 ವಿಶ್ವಕಪ್‌: ಮಳೆ ಪೀಡಿತ ಲೋ ಸ್ಕೋರ್‌ ಥ್ರಿಲ್ಲರ್‌ ಪಂದ್ಯದಲ್ಲಿ 3 ವಿಕೆಟ್‌ ಗೆಲುವು. ವಿಂಡೀಸ್‌ 8 ವಿಕೆಟ್‌ಗೆ 135 ರನ್‌. 17 ಓವರಲ್ಲಿ 123 ಗುರಿ ಪಡೆದ ದಕ್ಷಿಣ ಆಫ್ರಿಕಾ 16.1 ಓವರಲ್ಲಿ 7 ವಿಕೆಟ್‌ಗೆ 124. ಹೀಗಾಗಿ ಸೆಮಿಫೈನಲ್‌ ಪ್ರವೇಶ

ನಾರ್ಥ್‌ ಸೌಂಡ್‌(ಆ್ಯಂಟಿಗಾ): ಮಹತ್ವದ ಟೂರ್ನಿಗಳ ನಿರ್ಣಾಯಕ ಪಂದ್ಯಗಳಲ್ಲಿ ದುರದೃಷ್ಟಕರವಾಗಿ ಸೋತು ಹೊರಬೀಳುವುದಕ್ಕೆ ಹೆಸರುವಾಸಿಯಾಗಿದ್ದ ‘ಚೋಕರ್ಸ್’ ಖ್ಯಾತಿಯ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಇತಿಹಾಸ ಅಳಿಸಿ ಹಾಕುವ ಪ್ರಯತ್ನದಲ್ಲಿ ಮೊದಲ ಯಶ ಕಂಡಿದೆ. 

ಟಿ20 ವಿಶ್ವಕಪ್‌ನ ಸೂಪರ್‌-8 ಹಂತದ ‘ಕ್ವಾರ್ಟರ್‌ ಫೈನಲ್‌’ ಎಂದೇ ಬಿಂಬಿತಗೊಂಡಿದ್ದ ಪಂದ್ಯದಲ್ಲಿ ಸೋಮವಾರ ವೆಸ್ಟ್‌ಇಂಡೀಸ್‌ ವಿರುದ್ಧ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 3 ವಿಕೆಟ್‌ ರೋಚಕ ಗೆಲುವು ಸಾಧಿಸಿದ ದ.ಆಫ್ರಿಕಾ, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ವಿಂಡೀಸ್‌, ಗುಂಪು 2ರಲ್ಲಿ 3ನೇ ಸ್ಥಾನಿಯಾಗಿ ಟೂರ್ನಿಯಿಂದ ಹೊರಬಿದ್ದಿದೆ. 

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 8 ವಿಕೆಟ್‌ ಕಳೆದುಕೊಂಡು ಕಲೆಹಾಕಿದ್ದು ಕೇವಲ 135 ರನ್‌. 1.1 ಓವರ್‌ ಆಗುವಾಗಲೇ ಶಾಯ್‌ ಹೋಪ್‌(00), ಪೂರನ್‌(01) ವಿಕೆಟ್‌ ಕಳೆದುಕೊಂಡ ತಂಡಕ್ಕೆ ರೋಸ್ಟನ್‌ ಚೇಸ್‌(52) ಹಾಗೂ ಕೈಲ್‌ ಮೇಯರ್ಸ್‌(35) ಆಸರೆಯಾದರು. ಆದರೆ ಇಬ್ಬರನ್ನೂ ಪೆವಿಲಿಯನ್‌ಗಟ್ಟಿದ ತಬ್ರೇಜ್‌ ಶಮ್ಸಿ ದ.ಆಫ್ರಿಕಾ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು.

 12 ಓವರಲ್ಲಿ 86ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 32 ರನ್‌ಗೆ 6 ವಿಕೆಟ್‌ ನಷ್ಟಕ್ಕೊಳಗಾಯಿತು. ಶಮ್ಸಿ 27ಕ್ಕೆ 3 ವಿಕೆಟ್‌ ಪಡೆದರು.ದ.ಆಫ್ರಿಕಾ ತನ್ನ ಇನ್ನಿಂಗ್ಸ್‌ ಆರಂಭಿಸಿ 2 ಓವರಲ್ಲಿ 2 ವಿಕೆಟ್‌ಗೆ 15 ರನ್‌ ಗಳಿಸಿದ್ದಾಗ ಆಟಕ್ಕೆ ಮಳೆ ಅಡ್ಡಿಪಡಿಸಿತು. ಸುಮಾರು 1 ಗಂಟೆ ಬಳಿಕ ಆಟ ಪುನಾರಂಭಗೊಂಡಿತು. ದ.ಆಫ್ರಿಕಾಕ್ಕೆ 17 ಓವರಲ್ಲಿ 123 ರನ್‌ ಗುರಿ ನಿಗದಿಪಡಿಸಲಾಯಿತು. 

10 ಓವರಲ್ಲಿ 89 ರನ್ ಗಳಿಸಿದ್ದ ತಂಡಕ್ಕೆ ಕೊನೆ 7 ಓವರಲ್ಲಿ ಕೇವಲ 34 ರನ್‌ ಬೇಕಿತ್ತು. ಆದರೆ ರನ್‌ ಗಳಿಸಲು ತಿಣುಕಾಡಿದ್ದಲ್ಲದೇ, ಅನಗತ್ಯ ಹೊಡೆತಗಳಿಗೆ ಕೈಹಾಕಿ ಸತತ ವಿಕೆಟ್‌ ಕಳೆದುಕೊಂಡಿತು. ಆದರೆ 16ನೇ ಓವರ್‌ನ ಕೊನೆ ಎಸೆತದಲ್ಲಿ ರಬಾಡ ಬೌಂಡರಿ, 17ನೇ ಓವರ್‌ನ ಮೊದಲ ಎಸೆತದಲ್ಲಿ ಯಾನ್ಸನ್‌ ಸಿಕ್ಸರ್‌ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.ಸ್ಕೋರ್‌: ವಿಂಡೀಸ್‌ 20 ಓವರಲ್ಲಿ 135/8 (ಚೇಸ್‌ 52, ಮೇಯರ್ಸ್‌ 35, ಶಮ್ಸಿ 3-27), ದ.ಆಫ್ರಿಕಾ 16.1 ಓವರಲ್ಲಿ 124/7 (ಸ್ಟಬ್ಸ್‌ 29, ಕ್ಲಾಸೆನ್‌ 22, ಯಾನ್ಸನ್‌ 21*, ಚೇಸ್‌ 3-12) ಪಂದ್ಯಶ್ರೇಷ್ಠ: ತಜ್ರೇಜ್‌ ಶಮ್ಸಿ

10 ವರ್ಷಗಳ ಬಳಿಕ ಆಫ್ರಿಕಾ ಸೆಮೀಸ್‌ಗೆ

ದ.ಆಫ್ರಿಕಾ ಟಿ20 ವಿಶ್ವಕಪ್‌ನಲ್ಲಿ 10 ವರ್ಷ ಬಳಿಕ ಸೆಮಿಫೈನಲ್‌ ಪ್ರವೇಶಿಸಿತು. 2009ರಲ್ಲಿ ಮೊದಲ ಬಾರಿ, 2014ರಲ್ಲಿ ಕೊನೆ ಬಾರಿ ಸೆಮೀಸ್‌ಗೇರಿದ್ದ ತಂಡ, ಕಳೆದ 3 ಆವೃತ್ತಿಗಳಲ್ಲೂ 2ನೇ ಸುತ್ತಿನಲ್ಲಿ ಹೊರಬಿದ್ದಿತ್ತು.

07 ಪಂದ್ಯ: ದ.ಆಫ್ರಿಕಾ ಈ ಬಾರಿ 7 ಪಂದ್ಯ ಗೆದ್ದಿದೆ. ಇದು ಟಿ20 ವಿಶ್ವಕಪ್‌ ಆವೃತ್ತಿಯಲ್ಲಿ ತಂಡವೊಂದರ ಗರಿಷ್ಠ. 2009ರಲ್ಲಿ ಶ್ರೀಲಂಕಾ, 2010, 2011ರಲ್ಲಿ ಆಸೀಸ್‌ ತಲಾ 6 ಪಂದ್ಯಗಳಲ್ಲಿ ಗೆದ್ದಿದ್ದವು.